ನ್ಯೂಸ್ ನಾಟೌಟ್ : ಶ್ರೀಕ್ಷೇತ್ರ ಧರ್ಮಸ್ಥಳ ಅಂದರೆ ಅದು ಧರ್ಮದ ನೆಲೆವೀಡು. ಭಕ್ತ ಕೋಟಿಯ ಆರಾಧನಾ ತಾಣ. ಬೇಡಿದ ಬಯಕೆ ಈಡೇರಿಸುವ ಮಂಜುನಾಥ. ಕೋಟಿ ಕೋಟಿ ಭಕ್ತರು ಆಗಮಿಸುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ 3ರಂದು ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆಯಲಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ 201 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿವೆ.
ಮೇ 2ರಂದು ಎಲ್ಲರ ದಾಖಲೆಗಳನ್ನು ಪರಿಶೀಲಿಸಿ ವಧುವಿಗೆ ಸೀರೆ, ರವಿಕೆ ಕಣ ಮತ್ತು ವರನಿಗೆ ಧೋತಿ, ಶಾಲು ನೀಡಲಾಗುತ್ತದೆ. ಮೇ 3ರಂದು ಸಂಜೆ 5ರಿಂದ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ವಿವಾಹ ನೆರವೇರಲಿರುವ ಅಮೃತವರ್ಷಿಣಿ ಸಭಾ ಮಂಟಪಕ್ಕೆ ಭವ್ಯ ಮೆರವಣಿಗೆಯಲ್ಲಿ ಸಾಗುವರು. ಅಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಚಿತ್ರನಟ ತೂಗುದೀಪ ದರ್ಶನ್ ಅವರು ಮಂಗಳಸೂತ್ರ ವಿತರಿಸುವರು.
ವಿವಾಹ ಸಮಾರಂಭವು ಅವರವರ ಜಾತಿ ಸಂಪ್ರದಾಯದಂತೆ ಸಂಭ್ರಮದಿಂದ ನೆರವೇರಲಿದೆ. ಬಳಿಕ ಅನ್ನಪೂರ್ಣ ಭೋಜನಾಲಯದಲ್ಲಿ ವಿವಾಹ ಭೋಜನ ಇರಲಿದೆ.ವರದಕ್ಷಿಣೆ ಹಾಗೂ ಮದುವೆಗಾಗಿ ಆಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಪ್ರಾರಂಭಿಸಲಾಗಿತ್ತು. ಬಳಿಕ ಪ್ರತೀ ವರ್ಷ ನಡೆಯುತ್ತಿದೆ. ಕಳೆದ ವರ್ಷದವರೆಗೆ 12,576 ಜೋಡಿಗಳಿಗೆ ವಿವಾಹವಾಗಿದೆ.