ನ್ಯೂಸ್ ನಾಟೌಟ್: ಕಷ್ಟವನ್ನು ಎದುರಿಸುವ, ಖುಷಿಯನ್ನು ಹಂಚುವ, ನೋವನ್ನು ನುಂಗುವ, ದೇಶವನ್ನು ಕಟ್ಟುವ, ತ್ಯಾಗ- ಶ್ರಮಜೀವಿಗಳೇ ಕಾರ್ಮಿಕರು. ಇವರ ಸೇವೆಯನ್ನು ಗೌರವಿಸಲು ಮೇ 1 ನ್ನು ಜಗತ್ತಿನಾದ್ಯಂತ ಇಂದು ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಿದ್ದಾರೆ. ಇದನ್ನು 'ಮೇ ಡೇ, ಕಾರ್ಮಿಕರ ದಿನ, ಲೇಬರ್ಸ್ ಡೇ, ವರ್ಕರ್ಸ್ ಡೇ' ಎಂದೆಲ್ಲಾ ಕರೆಯುತ್ತಾರೆ.
1886 ರಲ್ಲಿ ಅಮೇರಿಕಾದಲ್ಲಿ ಈ ಕಾರ್ಮಿಕರ ದಿನವನ್ನು ಮೊತ್ತ ಮೊದಲ ಬಾರಿಗೆ ಆಚರಿಸುತ್ತಾರೆ. ಕಾರ್ಮಿಕರ ದಿನಾಚರಣೆಯು ಮೂಲದಲ್ಲಿ ಅದು ವಿದೇಶಿ ಚಳುವಳಿ. 1856 ಏಪ್ರಿಲ್ 21ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಪ್ರದೇಶದಲ್ಲಿ ಕಲ್ಲುಕುಟಿಗರು ಮತ್ತು ಕಟ್ಟಡ ಕಾರ್ಮಿಕರು ಮಾಡಿದ ಮುಷ್ಕರದ ಯಶಸ್ಸಿನ ಫಲವೇ ಈ ದಿನಾಚರಣೆ. ದಿನದ 15 ಗಂಟೆಗಳ ಕಾಲ ದುಡಿಯುತ್ತಿದ್ದ ಕಾರ್ಮಿಕರು ತಮ್ಮ ಕೆಲಸದ ಸಮಯವನ್ನು 8 ಗಂಟೆ ಅವಧಿಗೆ ತರಬೇಕೆಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ ಅದರಲ್ಲಿ ಯಶಸ್ಸನ್ನು ಕಂಡ ಸವಿ ನೆನಪಿಗಾಗಿ ಇಂದು ಜಗತ್ತಿನಾದ್ಯಂತ ಅದನ್ನು ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಿದ್ದಾರೆ. ಭಾರತದಲ್ಲಿ ಈ ಆಚರಣೆ 1923 ರಿಂದ ಪ್ರಾರಂಭವಾಗುತ್ತದೆ. ಅಂದಿನ ಮದ್ರಾಸ್ ಅಂದರೆ ಈಗಿನ ಚೆನ್ನೈನಲ್ಲಿ 'ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್' ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕರ ದಿನದ ಆಚರಣೆಗೆ ನಾಂದಿ ಹಾಡಿತ್ತು. ಪ್ರಸ್ತುತ ದಿನಗಳಲ್ಲಿ ಭಾರತ ಸೇರಿದಂತೆ ನಾನಾ ದೇಶಗಳು ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳ ಸೇವೆಯನ್ನು ಸ್ಮರಿಸುವ ಕೆಲಸ ಮಾಡುತ್ತಿವೆ.
ಕಠಿಣ ಪರಿಶ್ರಮ, ಸಮರ್ಪಣಾ ಭಾವ, ಬಲವಾದ ಇಚ್ಚಾ ಶಕ್ತಿಯ ಮೂಲಕ ಕಷ್ಟಪಟ್ಟು ದುಡಿದು, ಪ್ರತಿಯೊಂದು ರಾಜ್ಯ, ದೇಶದ ಪ್ರಗತಿಗೆ ಕಾರಣಕರ್ತರಾಗಿರುವ ಶ್ರಮಜೀವಿ ಈ ಕಾರ್ಮಿಕ. ತಾನು ದುಡಿಯುವ ಸ್ಥಳದಲ್ಲಿ ಹಗಲು -ರಾತ್ರಿ, ಬಿಸಿಲು- ಮಳೆಯನ್ನು ಲೆಕ್ಕಿಸದೇ ಕೆಲಸ ಮಾಡಿ ಮಾಲಿಕನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾನೆ. 'ಕಾರ್ಮಿಕ ಬಡವನಲ್ಲ, ಕಾರ್ಮಿಕನಿದ್ದಾಗಲೇ ಮಾಲೀಕ'. ಅದಕ್ಕೆ ಹೇಳುವುದು -'ಒಬ್ಬ ಮಾಲಿಕ ತಾನು ಮಾಲಿಕನೆಂದು ಕರೆಸಿಕೊಳ್ಳುವುದು ಅಲ್ಲಿ ಶ್ರಮವಹಿಸಿ ದುಡಿಯುವ ಕಾರ್ಮಿಕ ನಿದ್ದಾಗಲೇ'. ಒಂದು ಸಂಸ್ಥೆ, ಒಂದು ಕಾರ್ಖಾನೆ, ಒಂದು ಇಲಾಖೆ ಯಾವುದೇ ಇರಬಹುದು, ಅದು ಮೇಲ್ಮಟ್ಟಕ್ಕೆ ಏರುವುದು, ಹೆಸರನ್ನು ಪಡೆಯುವುದು, ಲಾಭ ಗಳಿಸುವುದು ಅಲ್ಲಿ ದುಡಿಯುವ ಕಾರ್ಮಿಕ ವರ್ಗದಿಂದಲೇ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶ ಅಭಿವೃದ್ಧಿ ಪಥದತ್ತ ಸಾಗಲು ಕಾರ್ಮಿಕನ ಪಾತ್ರ ಬಹಳಷ್ಟಿದೆ ಎಂದರೆ ಅತಿಶಯೋಕ್ತಿಯಲ್ಲ..
ಇಷ್ಟೆಲ್ಲ ಪ್ರಗತಿಗೆ ಕಾರಣವಾಗುತ್ತಿರುವ ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಕೇವಲ ಒಂದು ದಿನವನ್ನು ಘೋಷಿಸಿ ಆ ದಿನ ಅವರನ್ನು ಹಾಡಿ, ಹೊಗಳಿ, ಸನ್ಮಾನಿಸಿ, ಬೋನಸ್ ನೀಡಿದರೆ ಆ ದಿನಕ್ಕೆ ಮಹತ್ವ ಬರುವುದಿಲ್ಲ. ವರ್ಷದ 365 ದಿನವೂ ದುಡಿಯುವ ಶ್ರಮಿಕ ವರ್ಗದ ದಿನವಾಗಬೇಕು. ಹಾಗಾಗಿ ಆ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ಇರಬೇಕು ಎಂದಾದಲ್ಲಿ ಆತ ದಿನನಿತ್ಯ ದುಡಿಯುವ ಜಾಗದಲ್ಲಿ ಸುಖ, ಶಾಂತಿ, ನೆಮ್ಮದಿ, ಮಾನಸಿಕ ಸ್ವಾಸ್ಥ್ಯದ ಅಗತ್ಯವಿರುತ್ತದೆ.
ಯಾವನೇ ಒಬ್ಬ ವ್ಯಕ್ತಿ ತಾನು ದುಡಿಯುವ ಸ್ಥಳದಲ್ಲಿ ಮೊದಲು ಬಯಸುವುದು ಇವುಗಳನ್ನೇ. ಅದು ಮಾಲಿಕನಿಂದ ಇರಬಹುದು, ಮೇಲಾಧಿಕಾರಿಗಳಿಂದ ಇರಬಹುದು, ಜೊತೆಗಾರರಿಂದ ಇರಬಹುದು.
ಮೇ 1ನ್ನು ಕಾರ್ಮಿಕರಿಗೆ ಮೀಸಲಿಟ್ಟು, ಒಂದು ದಿನ ಅವರನ್ನು ಹಾಡಿ ಹೊಗಳಿದ ಮಾತ್ರಕ್ಕೆ ಅವರು ಸಂತೃಪ್ತ ಜೀವನ ನಡೆಸುತ್ತಿದ್ದಾರೆಯೇ? ಅಂದಿನಿಂದ ಇಂದಿನವರೆಗೆ ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಪ್ರತಿಪಾದಿಸುತ್ತಲೇ ಆ ದಿನವನ್ನು ಕಳೆಯುತ್ತಿದ್ದಾರೆ. ಒಂದಷ್ಟು ಘೋಷಣೆಗಳನ್ನು ಕೂಗುತ್ತಾರೆ, ಭರವಸೆ ಸಿಕ್ಕಾಗ ಸುಮ್ಮನಾಗುತ್ತಾರೆ. ಮುಂದಿನ ವರ್ಷ ಮತ್ತೆ ಇದೇ ಪುನರಾವರ್ತನೆ. ಯಾವನೇ ಒಬ್ಬ ಕಾರ್ಮಿಕ ನನಗೆ ಬರುತ್ತಿರುವ ಸಂಬಳ ಮತ್ತು ಭತ್ಯೆಗಳು ತೃಪ್ತಿಕರವಾಗಿವೆ, ಸೇವಾ ನಿಯಮಗಳು, ಸೌಲಭ್ಯಗಳು ಉತ್ತಮವಾಗಿವೆ, ನಾನು ಅದೃಷ್ಟವಂತ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಕಾರ್ಮಿಕ ವರ್ಗ ನಮ್ಮ ಮುಂದೆ ಇದ್ದಾರೆಯೇ? ಎನ್ನುವ ಪ್ರಶ್ನೆ
ಇಂತಹ ದಿನಾಚರಣೆಗಳನ್ನು ಆಚರಿಸುವ ಸಂದರ್ಭದಲ್ಲಿ ಮನಃಪಟಲದಲ್ಲಿ ಹಾದು ಹೋಗುತ್ತದೆ. ಇನ್ನೊಂದು ಕಡೆ ಬೇಕಾದಷ್ಟು ದುಡಿಸಿಕೊಂಡು ಯಾರದೋ ಮಾತಿಗೆ, ಇನ್ಯಾರದು ಆಮಿಷಕ್ಕೆ ಬಲಿಬಿದ್ದು ಆತನ ಸೇವೆಯನ್ನೇ ನಿರ್ಲಕ್ಷಿಸುವ ಮಾಲಿಕರ ಮುಂದೆ ಇಂತಹ ಆಚರಣೆಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಒಬ್ಬ ನಿಷ್ಠಾವಂತ ಕಾರ್ಮಿಕ ಯಾವತ್ತೂ ತನ್ನ ಮಾಲಿಕನ ವಿರುದ್ಧ, ಸಂಘ-ಸಂಸ್ಥೆಯ ವಿರುದ್ಧ, ಕಾನೂನಿನಲ್ಲಿ ಕಾರ್ಮಿಕರ ಪರವಾದ ನಿಲುವುಗಳಿದ್ದರೂ ಆತ ಧ್ವನಿ ಎತ್ತುವುದಿಲ್ಲ. ಯಾಕೆಂದರೆ ಅವನು ಅನ್ನ ಕೊಟ್ಟ ಮಾಲಿಕನಿಗೆ, ಸಂಸ್ಥೆಗೆ ಆತ ಕೊಡುವ ಗೌರವ ಅದು. ಮಾತ್ರವಲ್ಲ ತಾನು ದುಡಿಯುವ ಜಾಗಕ್ಕೆ ಅನ್ಯಾಯವಾಗಲು ಕೆಟ್ಟ ಹೆಸರು ಬರಲು ಆತ ಯಾವತ್ತೂ ಬಿಡುವುದಿಲ್ಲ. ಇದನ್ನು ಮಾಲಿಕರು ಅರ್ಥೈಸಿಕೊಂಡಾಗ ಕಾರ್ಮಿಕರು ಸಂತೃಪ್ತಿಯ ಜೀವನ ನಡೆಸುತ್ತಾರೆ.
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಇದು ಕೃಷ್ಣನ ಮಾತು. ದ್ವಾಪರ ಯುಗದಲ್ಲಿ ಕೃಷ್ಣನ ಮಾತಿನಂತೆ ಕೆಲಸಕ್ಕೆ ತಕ್ಕ ಪ್ರತಿಫಲ ಯಾವುದೋ ರೂಪದಲ್ಲಾದರೂ ಸಿಗುತ್ತಿತ್ತೇನೋ. ಆದರೆ ಇಂದು ಕಲಿಯುಗ. ಬಕ ಪಕ್ಷಿಗಳಂತೆ ಹೊಂಚು ಹಾಕಿ ಕುಳಿತಿರುವ ಇಂದಿನ ದಿನದಲ್ಲಿ ದುಡಿಮೆಗೆ ತಕ್ಕುದಾದ ಫಲ ತಾನು ದುಡಿಯುವ ಸ್ಥಳದಲ್ಲಿ ದೊರೆತಾಗಲೇ ಕಾರ್ಮಿಕನ ಮನಸ್ಸಿಗೆ ಸಮಾಧಾನ ಭಾವ ದೊರೆಯುತ್ತದೆ. ದುಡಿಮೆ ಯಾರದ್ದೋ, ಫಲ ಇನ್ಯಾರಿಗೋ ಎಂಬಂತಿರುವ ಇಂದಿನ ಕಲಿಯುಗದಲ್ಲಿ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೊಟ್ಟಾಗಲೇ ಕಾರ್ಮಿಕನಿಗೆ ಸಂತೃಪ್ತಿಯ ಭಾವ.
ಮತ್ತು ಆತ ಮನಃಪೂರ್ವಕವಾಗಿ ದುಡಿಯಲು ಸದಾ ಸಿದ್ಧನಾಗಿರುತ್ತಾನೆ. ನಿಮ್ಮ ಮನೆಗೆ ಬರುವ ಪ್ರತಿಯೊಬ್ಬ ಕಾರ್ಮಿಕನಿಗೆ ಗೌರವ ಕೊಡಿ. ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ವ್ಯಕ್ತಿ ಗೌರವ ಎನ್ನುವುದು ಇದ್ದೇ ಇರುತ್ತದೆ. ನಿಮ್ಮ ಕೈ ಕೆಳಗೆ ದುಡಿಯುತ್ತಿದ್ದಾನೆ ಎಂದ ಮಾತ್ರಕ್ಕೆ ಅವನನ್ನು ಹೀನಾಯವಾಗಿ ಕಾಣುವುದು, ಮನಬಂದಂತೆ ಬೈಯುವುದು, ನಡೆಸಿಕೊಳ್ಳುವುದು ಸರಿಯಲ್ಲ. ಕಾರ್ಮಿಕನಿಗೆ ಆಗುತ್ತಿರುವ ಅಸಮಾನತೆ, ಅನ್ಯಾಯ, ಒಬ್ಬೊಬ್ಬರಿಗೆ ಒಂದೊಂದು ನಿಯಮ, ಶೋಷಣೆಗಳನ್ನು ಹೊಡೆದೋಡಿಸಿದಾಗ, ಎಲ್ಲರಿಗೂ ಸಮಾನವಾದ ನೀತಿ- ನಿಯಮಗಳನ್ನು ಜಾರಿಗೆ ತಂದಾಗ ಆಚರಣೆ ಅರ್ಥವನ್ನು ಪಡೆದುಕೊಳ್ಳುತ್ತದೆ. ಒಟ್ಟಿನಲ್ಲಿ ಪ್ರತಿಯೊಂದು ದಿನವೂ
ಇವತ್ತು ಒಂದಲ್ಲ ಒಂದು ವಿಚಾರಕ್ಕೆ ಆಚರಣೆಗೆ ಒಳಗಾಗುತ್ತಿರುವ ಇಂದಿನ ದಿನದಲ್ಲಿ ಎಲ್ಲಾ ಆಚರಣೆಗಳು ಅದಕ್ಕೆ ತಕ್ಕುದಾದ ನ್ಯಾಯವನ್ನು ಒದಗಿಸುವ ಮೂಲಕ ಮಹತ್ವವನ್ನು ಪಡೆಯಲಿ ಎಂಬುದೇ ನಮ್ಮ ಸದಾಶಯ.