ನ್ಯೂಸ್ ನಾಟೌಟ್ : ನಿರುದ್ಯೋಗಿಗಳನ್ನೇ ಆರಿಸುತ್ತಿದ್ದ ಈತ ಹಲವು ಯುವಕರಿಗೆ ದರೋಡೆ ಕಲೆಯಲ್ಲಿ ತರಬೇತಿ ನೀಡಿ ಕಳ್ಳತನ ಮಾಡುವುದನ್ನೇ ಉದ್ಯೋಗವಾಗಿ ಆರಿಸಿಕೊಳ್ಳಲು ನೆರವಾಗುತ್ತಿದ್ದ ಎನ್ನಲಾಗಿದೆ. ಬಿಹಾರ ಬಾಬಾ ಎಂದು ಹೆಸರು ಇಟ್ಟುಕೊಂಡಿದ್ದ ಈತನನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಿಹಾರದ ಛಾಪ್ರಾ ಪಟ್ಟಣದಲ್ಲಿ ನಿರುದ್ಯೋಗಿ ಯುವಕರಿಗೆ ಕೇವಲ 15 ನಿಮಿಷಗಳಲ್ಲಿ ಎಟಿಎಂ ಒಡೆಯುವುದು ಹೇಗೆಂದು ಕಲಿಯಲು ಎಟಿಎಂ ಬಾಬಾ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಎಟಿಎಂ ದರೋಡೆಯಲ್ಲಿ ಪತ್ತೆಯಾದ ಹಲವಾರು ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈ ಸುಧೀರ್ ಮಿಶ್ರಾನ ಕೈವಾಡವಿರುವುದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಬಿಹಾರದ ಛಾಪ್ರಾ ನಿವಾಸಿ ಸುಧೀರ್ ಮಿಶ್ರಾ ಎಟಿಎಂ ಬಾಬಾ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ನಿರುದ್ಯೋಗಿ ಯುವಕರನ್ನು ತನ್ನ ಗ್ಯಾಂಗ್ಗೆ ಸೇರಿಸಿಕೊಂಡು ಎಟಿಎಂ ಒಡೆಯುವ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಲಕ್ನೋದಲ್ಲಿ ಆರೋಪಿಗಳು ಎಸ್ಬಿಐ ಎಟಿಎಂ ಮಷಿನ್ ಒಡೆದು ಕೇವಲ 16 ನಿಮಿಷದಲ್ಲಿ 39.58 ಲಕ್ಷ ರೂಪಾಯಿಯನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಮಿಶ್ರಾ ಅಲಿಯಾಸ್ ಎಟಿಎಂ ಬಾಬಾ ಸಂಪೂರ್ಣ ಕಳ್ಳತನವನ್ನು ಮಾಸ್ಟರ್ ಪ್ಲಾನರ್ ಆಗಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಎಟಿಎಂ ಒಡೆಯುವ ಜವಾಬ್ದಾರಿಯನ್ನು ಎಟಿಎಂ ಬಾಬಾ ತನ್ನ ಆತ್ಮೀಯ ಸ್ನೇಹಿತ ನೀರಜ್ ಮಿಶ್ರಾ ಅವರಿಗೆ ವಹಿಸಿದ್ದ. ನೀರಜ್ ಇತರ 3 ಜನರೊಂದಿಗೆ ಲಕ್ನೋದ ಅರ್ಜುನ್ಗಂಜ್ ಖುರ್ದಾಹಿ ಬಜಾರ್ ಸುಲ್ತಾನ್ಪುರ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನುಗ್ಗಿದ್ದಾರೆ. ಎಟಿಎಂಗೆ ಟಾರ್ಗೆಟ್ ಮಾಡಿ ಹಾನಿ ಮಾಡಿ ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿದ್ದಾರೆ.
ಎಟಿಎಂ ಯಂತ್ರವನ್ನು ಕತ್ತರಿಸಲು ಕಳ್ಳರು ಮೂರು ಗ್ಯಾಸ್ ಪೈಪ್, ಸಿಲಿಂಡರ್ ರೆಗ್ಯುಲೇಟರ್, ಗ್ಯಾಸ್ ಮೀಟರ್, ಆರು ಆ್ಯಕ್ಷನ್ ಬ್ಲೇಡ್, ಎರಡು ಕಟಿಂಗ್ ಪ್ಲೈಯರ್ ಮತ್ತು ಸುತ್ತಿಗೆ ಬಳಸಿದ್ದಾರೆ. ಕಳ್ಳರಿಂದ 9 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.