ನ್ಯೂಸ್ ನಾಟೌಟ್ : ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.ಶನಿವಾರ ಸಂಜೆ ವೇಳೆಗೆ ಸುಬ್ರಹ್ಮಣ್ಯ,ಸುಳ್ಯ ಪರಿಸರ ಭಾಗದಲ್ಲಿ ಗುಡುಗು,ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.ಈ ವೇಳೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ಮನೆಯೊಂದರ ಮೇಲ್ಛಾವಣಿ ಹಾರಿ ಹೋಗಿರುವ ಬಗ್ಗೆ ವರದಿಯಾಗಿದೆ.
ಹಲವೆಡೆ ವಾಹನ ಸಂಚಾರಕ್ಕೂ ಅಡಚಣೆಯಾಯಿತು.ರಸ್ತೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.ಕುಮಾರಧಾರಾ ಬಳಿ ಮುಖ್ಯರಸ್ತೆಗೆ ಅಡ್ಡ ಬೃಹತ್ ಮರವೊಂದು ಬಿದ್ದಿತ್ತು.ನೂಚಿಲದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು,ಒಂದು ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದ್ದು ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ. ಮತ್ತೊಂದು ಮನೆಗೆ ತೆಂಗಿನ ಮರ ಬಿದ್ದು 30 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕುಮಾರಪರ್ವತ ಭಾಗದಲ್ಲಿ ಹಾಗೂ ಸುತಮುತ್ತಲ ಪ್ರದೇಶಗಳಲ್ಲಿ ಕೂಡ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದ್ದು,ದರ್ಪಣ ತೀರ್ಥದಲ್ಲೂ ಭಾರೀ ಮಳೆ ನೀರು ಹರಿದಿದೆ. ಸುಬ್ರಹ್ಮಣ್ಯ ಸುತ್ತಮುತ್ತಲಿನ ಸಣ್ಣ ಪುಟ್ಟ ಹಳ್ಳ, ತೋಡುಗಳು ಸ್ವಲ್ಪ ಮಟ್ಟಿಗೆ ತುಂಬಿ ಹರಿದಿವೆ.ಸುಬ್ರಹ್ಮಣ್ಯದ ವಿದ್ಯಾನಗರ ಪ್ರದೇಶದಲ್ಲಿಯೂ ಸುಮಾರು 7-8 ಬಾಡಿಗೆ ಮನೆಗಳ ಮೇಲ್ಛಾವಣಿಯ ಸಿಮೆಂಟ್ ಶೀಟು, ಹಂಚುಗಳು ಗಾಳಿಗೆ ಹಾರಿಹೋಗಿವೆ. ಹಲವೆಡೆ ವಿದ್ಯುತ್ ತಂತಿ, ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಳ್ಯದಲ್ಲಿಯೂ ಮಳೆ
ಇತ್ತ ಸುಳ್ಯ ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದ್ದು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ.ಕೆಲವು ಕಡೆಗಳಲ್ಲಿ ವಾಹನ ಸಂಚಾರಕ್ಕೂ ತುಂಬಾ ಅಡಚಣೆಯಾಯಿತು. ಸುಳ್ಯ ನಗರ ಸೇರಿದಂತೆ ಮಡಪ್ಪಾಡಿ, ಜಾಲ್ಸೂರು, ಕನಕಮಜಲು, ಐವರ್ನಾಡು, ಬೆಳ್ಳಾರೆ, ನಿಂತಿಕಲ್ಲು,ಪೈಚಾರು, ಗುತ್ತಿಗಾರು, ಕಲ್ಮಡ್ಕ, ಅರಂತೋಡು,ಆಲೆಟ್ಟಿ,ಪಂಜ, ಸಂಪಾಜೆ, ಕಲ್ಲುಗುಂಡಿ ಸಹಿತ ಅಲ್ಲಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ.