ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಅರಂಬೂರಿನಲ್ಲಿರುವ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಸಂಪೂರ್ಣ ಭಸ್ಮವಾದ ಘಟನೆ ವರದಿಯಾಗಿದೆ.ವಿಷಯ ತಿಳಿದ ಸುಳ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅರಂಬೂರಿನ ಕರ್ನಾಟಕ ಪ್ಲೆ ವುಡ್ ಫ್ಯಾಕ್ಟರಿಯ ಎದುರಿನಲ್ಲಿ ಇರುವ ದಿವಾಕರ ಮಾಸ್ತರ್ ರವರಿಗೆ ಸೇರಿದ ಅಂಗಡಿ ಇದಾಗಿದ್ದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.ಸ್ಥಳೀಯರೊಬ್ಬರು ಹೊಗೆಯನ್ನು ಗಮನಿಸಿದ್ದು, ತಕ್ಷಣ ವಿಷಯ ತಿಳಿಸಿದರು. ಅಂಗಡಿ ಕಟ್ಟಡದ ಹಿಂದುಗಡೆಯಲ್ಲಿಯೇ ದಿವಾಕರ ಮಾಸ್ತರ್ ರವರು ವಾಸ್ತವ್ಯ ವಿದ್ದುದರಿಂದ ಅಂಗಡಿಯ ಎದುರಿನ ಶೆಟರನ್ನು ತೆರೆಯಲು ಪ್ರಯತ್ನಿಸಿದರು.
ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಒಳಗಿದ್ದ ಎಲ್ಲಾ ಸಾಮಾಗ್ರಿಗಳು ಸುಟ್ಟು ಕರಕಲಾದವು.ಬೆಂಕಿ ನಂದಿಸಲು ಸ್ಥಳೀಯ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ಸೇರಿದಂತೆ ಸ್ಥಳೀಯರು ಸಹಕರಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡವಾಯಿತೆಂದು ಅಂದಾಜಿಸಲಾಗಿದೆ. ಸುಮಾರು ರೂ. 8 ಲಕ್ಷಕ್ಕೂ ಮಿಕ್ಕಿ ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.