ನ್ಯೂಸ್ ನಾಟೌಟ್ : ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಗಮನ ಅವರ ಕಡೆ ಇರಲೇ ಬೇಕಾಗುತ್ತದೆ.ಇಲ್ಲದೇ ಹೋದರೆ ಒಂದು ಕ್ಷಣದಲ್ಲಿ ಏನೆಲ್ಲಾ ಅವಾಂತರಗಳಾಗಬಹುದು ಅನ್ನೋದಕ್ಕೆ ಈ ವರದಿಯೇ ಸಾಕ್ಷಿ.ಚಿಕ್ಕ ಮಕ್ಕಳನ್ನು ಸಮಾಧಾನ ಪಡಿಸಲು ಅಂಗಡಿ ತಿಂಡಿಗಳನ್ನು ಖರೀದಿಸಿ ಅವರ ಕೈಗೆ ನೀಡಿ ಕೆಲಸದಲ್ಲಿ ಮಗ್ನರಾಗುವ ಪೋಷಕರು ಓದಲೇ ಬೇಕಾದ ವರದಿ…
ಇನ್ನು ಬಾಳಿ ಬದುಕಬೇಕಾದ ಮೂರು ವರ್ಷದ ಕಂದಮ್ಮ ಗಂಟಲಲ್ಲಿ ಹೆಬ್ಬೆರಳು ಗಾತ್ರದ ಜೇಮ್ಸ್ ಗಾಜಿನ ಬಾಟಲಿ ಸಿಲುಕಿ ಮೃತಪಟ್ಟಿದ್ದಾನೆ. ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಕುಷ್ಟಗಿ ಪಟ್ಟಣದಲ್ಲಿ..
ಕುಷ್ಟಗಿ ವಾರ್ಡ್ ನಂ.8 ಮದಿನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಎಂದು ಗುರುತಿಸಲಾಗಿದೆ. ಬಾಲಕನಿಗೆ 1ರೂ.ನ ಸಿಹಿ ತಿನಿಸು ಜೇಮ್ಸ್ ಬಾಟಲಿ ಆತನ ಕೈಗೆ ನೀಡಲಾಗಿದೆ. ಅದರ ಮುಚ್ಚಳ ಬಾಯಿಂದ ತೆಗೆಯಲು ಯತ್ನಿಸಿದ ಸಂದರ್ಭದಲ್ಲಿ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದಾನೆ. ಪಾಲಕರಿಗೆ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗ ಮಧ್ಯೆಯೇ ಬಾಲಕ ಅಸುನೀಗಿದ್ದಾನೆ.
ಬಾಲಕನ ಸಾವಿಗೆ ಕುಟುಂಬ ವರ್ಗದ ರೋಧನ ಮುಗಿಲುಮಟ್ಟಿದೆ.ಆಟವಾಡಿಕೊಂಡಿದ್ದ ಮಗುವಿನ ಅಗಲಿಕೆ ಇನ್ನಿಲ್ಲದ ನೋವು ತಂದಿದೆ.ಪುಟ್ಟ ಮಕ್ಕಳಿಗೆ ಸಣ್ಣ ಸಣ್ಣ ವಸ್ತುಗಳನ್ನು ಕೈಗೆ ನೀಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳುವುದು ಒಳಿತು.ಇಂತಹ ಸಿಹಿ ತಿನಿಸು, ಗುಣಮಟ್ಟ ರಹಿತ ತಿನಿಸನ್ನು ಬ್ಯಾನ್ ಮಾಡಬೇಕೆಂದು ವಾರ್ಡ್ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಆಗ್ರಹಿಸಿದ್ದಾರೆ.