ನ್ಯೂಸ್ ನಾಟೌಟ್: 2022ರ ಜುಲೈ 26ರಂದು ರಾತ್ರಿ ಹತ್ಯೆಯಾದ ಬಿಜೆಪಿ ಯುವನಾಯಕ,ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಕಟ್ಟಿಕೊಟ್ಟಿರುವ ಮನೆಯ ಗೃಹಪ್ರವೇಶ ಇಂದು ನಡೆಯಿತು. ಮತ್ತೊಂದೆಡೆ ಮನೆ ಪಕ್ಕದಲ್ಲಿಯೇ ಪ್ರವೀಣ್ ನೆಟ್ಟಾರು ಸಮಾಧಿ ಬಳಿ ಕಂಚಿನ ಪ್ರತಿಮೆಯಿದ್ದು,ಗೃಹಪ್ರವೇಶದ ದಿನದಂದೇ ಅನಾವರಣಗೊಂಡಿತು.ಬೆಂಗಳೂರಿನ ಬಿಡದಿಯಲ್ಲಿ ಈ ಪ್ರತಿಮೆಯನ್ನು ಸಿದ್ದಪಡಿಸಿ, ಅಲ್ಲಿಂದ ಇಲ್ಲಿಗೆ ತಂದು ಪ್ರತಿಷ್ಠಾಪಿಸಲಾಗಿದೆ.ಪ್ರವೀಣ್ ನೆಟ್ಟಾರು ಈಗಿರುವ ಮನೆಯ ಅಂಗಳ ಸಮೀಪದಲ್ಲಿಯೇ ಈ ಪ್ರತಿಮೆಯಿದ್ದು, ಮನೆಯ ಬಲಭಾಗದಲ್ಲಿ ಈ ಮೂರ್ತಿಯಿದೆ.ಪ್ರವೀಣ್ ಗೃಹಪ್ರವೇಶಕ್ಕೆ ಬಂದ ಅತಿಥಿ,ಅಭ್ಯಾಗತರು ಇಲ್ಲಿಗೂ ಭೇಟಿ ನೀಡಿದರು.
ಪ್ರವೀಣ್ ಅವರ ಪುತ್ಥಳಿ ನೋಡಿದಾಗ ಅವರು ನಮ್ಮೊಂದಿಗೆ ಇಲ್ಲದಿದ್ದರೂ,ಮಾನಸಿಕವಾಗಿ ಅವರು ಯಾವತ್ತೂ ನಮ್ಮ ಜತೆಯಿರುತ್ತಾರೆ, ಪ್ರವೀಣ್ ಕುಟುಂಬದ ರಕ್ಷಣೆಯನ್ನು ಮಾಡುತ್ತಿರುತ್ತಾರೆ ಎಂದೆನಿಸುತ್ತಿದೆ. ಇನ್ನು ಪ್ರತಿಮೆಯ ಕೆಳಭಾಗದಲ್ಲಿ ಪ್ರವೀಣ್ ನೆಟ್ಟಾರು ‘ನೆನಪು’ ಅಂತ ಬರೆಯಲಾಗಿದೆ. ಜನನ-ಮರಣ ದಿನಾಂಕವನ್ನು ಕೂಡ ನೀವು ನೋಡಬಹುದಾಗಿದೆ.
ಪ್ರವೀಣ್ ಅವರು ಮನೆ ನಿರ್ಮಾಣದ ದೊಡ್ಡ ಕನಸು ಕಂಡಿದ್ದರು. ಪ್ರವೀಣ್ ಹತ್ಯೆ ವೇಳೆ ಬಿಜೆಪಿ ವರಿಷ್ಠರು ನೀಡಿದ್ದ ಭರವಸೆಯಂತೆ ಈ ಮನೆ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಮನೆಯ ನಿರ್ಮಾಣ ಕೆಲಸ ಕಾರ್ಯ ಮುಗಿದು ಇಂದು ಗೃಹಪ್ರವೇಶ ನೆರವೇರಿತು. ಪ್ರವೀಣ್ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ದ.ಕ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮನೆ ನಿರ್ಮಾಣವಾಗಿದೆ.ಇದೀಗ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರ ಅಪೇಕ್ಷೆಯಂತೆ ಅವರು ನೀಡಿರುವ ನಕ್ಷೆಯಲ್ಲೇ 2,700 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದೆ.ಈ ಮನೆಗೆ ಸುಮಾರು 70 ಲಕ್ಷ ರೂಪಾಯಿ ವೆಚ್ಚವಾಗಿದ್ದು ಸಂಪೂರ್ಣ ಖರ್ಚನ್ನು ಪಕ್ಷದ ವತಿಯಿಂದಲೇ ಭರಿಸಲಾಗಿದೆ. ಮನೆಗೆ ‘ಪ್ರವೀಣ್ ನಿಲಯ’ ಎಂದು ಹೆಸರಿಡಲಾಗಿದೆ.
ಮನೆಯ ನಾಮಫಲಕವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅನಾವರಣಗೊಳಿಸಿದರು. ಪ್ರವೀಣ್ ನೆಟ್ಟಾರು ಅವರ ಸಮಾಧಿಯ ಮೇಲೆ ನಿರ್ಮಿಸಲಾದ ಕಂಚಿನ ಪುತ್ಥಳಿಯನ್ನು ಮೋಹನದಾಸ ಪರಮಹಂಸ ಸ್ವಾಮೀಜಿಯವರು ಅನಾವರಣಗೊಳಿಸಿದರು. ಬಿಲ್ಲವ ಸಂಘದ ಮುಖಂಡ ಜಯಂತ ನಡುಬೈಲು ಪುತ್ಥಳಿಗೆ ಹಾರಾರ್ಪಣೆಗೈದರು. ಮನೆ ನಿರ್ಮಿಸಿಕೊಡಲು ಕಾರಣಕರ್ತರಾದ ನಳಿನ್ಕುಮಾರ್ ಕಟೀಲ್, ಮನೆ ನಿರ್ಮಾಣ ಮಾಡಿದ ಮೊಗೆರೋಡಿ ಕನ್ಸ್ಟ್ರಕ್ಷನ್ನ ಸುಧಾಕರ ಶೆಟ್ಟಿ ಹಾಗೂ ಉಸ್ತುವಾರಿಯಲ್ಲಿ ಸಹಕರಿಸಿದ ಆರ್.ಕೆ. ಭಟ್ ಕುರುಂಬುಡೇಲು ಅವರನ್ನು ಸನ್ಮಾನಿಸಲಾಯಿತು.
ಪ್ರವೀಣ್ ನೆಟ್ಟಾರು ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ, ಸಹೋದರಿಯರಾದ ರೋಹಿಣಿ, ಹರಿಣಿ, ನಳಿನಿ ಅವರು ಅತಿಥಿಗಳನ್ನು ಸ್ವಾಗತಿಸಿ ಮನೆಗೆ ಬರಮಾಡಿಕೊಂಡರು.