ನ್ಯೂಸ್ ನಾಟೌಟ್: ಕೊಡಗಿನಲ್ಲಿ ಬಿಸಿಲ ಬೇಗೆ ಬೆನ್ನಲ್ಲೇ ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಒಂದು ಇಂಚಿಗೂ ಅಧಿಕ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಇದರಿಂದ ಕಾದ ಇಳೆ ಸ್ವಲ್ಪ ಮಟ್ಟಿಗೆ ತಂಪಾಗಿದೆ.
ಕಳೆದ ಕೆಲ ದಿನಗಳಿಂದ ಕಾಫಿ ಬೆಲೆಗಾರರು ತತ್ತರಿಸಿ ಹೋಗಿದ್ದರು.ಬಿಸಿಲ ಪ್ರಖರತೆಗೆ ಕಾಫಿ ಗಿಡಗಳು ಒಣಗಲು ಆರಂಭಗೊಂಡಿದ್ದವು.ಈ ಹಿನ್ನಲೆಯಲ್ಲಿ ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೈಕಾಡು, ಬೇತು, ಚೆರಿಯಪರಂಬು, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಕಕ್ಕಬ್ಬೆ ಸೇರಿದಂತೆ ವಿಭಾಗದ ಅಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ನಿರಾಳರಾಗಿದ್ದಾರೆ.
ನಾಪೋಕ್ಲು ವಿಭಾಗದಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಪವಿತ್ರ ಕಾವೇರಿ ನದಿ ಸೇರಿದಂತೆ ವ್ಯಾಪ್ತಿಯ ಇನ್ನಿತರ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಸಮಸ್ಯೆ ಸ್ವಲ್ಪಮಟ್ಟಿಗೆ ದೂರವಾದಂತಾಗಿದೆ.