ನ್ಯೂಸ್ ನಾಟೌಟ್:ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ.ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರು ಮತದಾರರ ಮನೆ-ಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರತಿದಿನ ಮೂರರಿಂದ ಮೂರುವರೆ ಕೋಟಿ ರೂಪಾಯಿ ಹಣ ಹಂಚುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಇಂದು ಬೆಳ್ತಂಗಡಿಯಲ್ಲಿ ಹೇಳಿದ್ದಾರೆ.
ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಹೇಳಿದರು.ಪೂಂಜರು ಚುನಾವಣಾ ಪ್ರಚಾರಕ್ಕೆ ಹೋಗುವ ಸಂದರ್ಭ ಪೂಂಜರ ಜತೆಗೆ ನಾಲ್ಕು ಕಾರುಗಳು ಹೋಗುತ್ತವೆ.ಅದರಲ್ಲಿ ಒಂದು ಕಾರು ದೊಡ್ಡ ಮೊತ್ತದ ಹಣವನ್ನು ತುಂಬಿ ಸಾಗುತ್ತಿದೆ. ಪ್ರತಿ ಮನೆ-ಮನೆಗೆ ರೂ.ಇಪ್ಪತ್ತೈದು ಸಾವಿರ, ಐವತ್ತು ಸಾವಿರ, ಒಂದು ಲಕ್ಷ, ಐದು ಲಕ್ಷದವರೆಗೂ ಹಂಚುತ್ತಾರೆ ಎಂದಿದ್ದಾರೆ.
ಗ್ರಾಮಸ್ಥರ ಬಳಿ ತೆರಳುವಾಗ ಮನೆಯವರು ನಮಗೆ ಹಣ ಬೇಡವೆಂದರೂ ಕೂಡ ಮೇಜಿನ ಮೇಲೆ ಇಟ್ಟು ಹೋಗುತ್ತಾರೆ.ಕಾರ್ಯಕರ್ತರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗೆ ಹೋಗಿ ದೇವರ ಫೋಟೋ ಮುಟ್ಟಿಸಿ ಪ್ರತಿ ಮತವೊಂದಕ್ಕೆ ಒಂದು, ಎರಡು ಸಾವಿರ ನೀಡಿ ಪ್ರಮಾಣ ಮಾಡಿಸುತ್ತಾರೆ.ಪೂಂಜರು ಹಂಚುವ ಈ ಎಲ್ಲಾ ಹಣ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿಗಳ 40% ಕಮಿಷನ್ ಆಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾಧಿಕಾರಿಗಳು, ಪೊಲೀಸರು, ಕಂದಾಯ ಅಧಿಕಾರಿಗಳು ನಮ್ಮ ಕಾಂಗ್ರೆಸ್ ನಾಯಕರುಗಳನ್ನು ತನಿಖೆ ಮಾಡುತ್ತಾರೆ.ಆದರೆ ಶಾಸಕರು ಹಂಚುವ ಈ ಹಣದ ಬಗ್ಗೆ ಯಾವುದೇ ತನಿಖೆ ಇಲ್ಲ.ಖುಷಿ ಆಂಬುಲೆನ್ಸ್ನಲ್ಲಿ ಹಣ ಸಾಗಾಟ ಮಾಡುತ್ತಿರುವುದು ಕೂಡ ಪೊಲೀಸರಿಗೆ, ಚುನಾವಣಾಧಿಕಾರಿಗಳಿಗೆ ಕಾಣಿಸುವುದಿಲ್ಲ.ತಾಲೂಕಿನ ದೇವಸ್ಥಾನಗಳಲ್ಲಿ ಆಡಂಬರದ ಬ್ರಹ್ಮಕಲಶ ಮಾಡಿಸಿ, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಅನುಭವಿಸುವಂತಾಗಿದೆ ಎಂದು ಸಿಡಿದರು.
ವೇಣೂರು ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ಆಡಂಬರ ಮಾಡಲಾಗಿದ್ದು, ಇದರಿಂದ ನಷ್ಟವಾಗಿದೆ. ಈ ದೇವಸ್ಥಾನಕ್ಕೆ ನಾನು ಶಾಸಕನಾಗಿದ್ದ ಸಂದರ್ಭ ೯೫ ಲಕ್ಷ ರೂಪಾಯಿ ಅನುದಾನಕೊಡಿಸಿದ್ದೆ.ಹರೀಶ್ ಪೂಂಜ ಕೇವಲ 5 ಲಕ್ಷ ನೀಡಿರುವುದು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಹೊರಗಿನವರೆಂದು ಅಪಪ್ರಚಾರ ಮಾಡುತ್ತಾರೆ.ಆದರೆ ಅವರು ಬೆಳ್ತಂಗಡಿಯಲ್ಲೇ ಹುಟ್ಟಿದವರು ಎಂದರು.