ನ್ಯೂಸ್ ನಾಟೌಟ್ : 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸದ್ಯ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಪ್ರಚಾರ ಕಾರ್ಯ ಚುರುಕಾಗಿದೆ. ಈ ನಡುವೆ ಎದುರಾಳಿಗಳನ್ನು ಸೋಲಿಸಲು ಅಭ್ಯರ್ಥಿಗಳು ನಾನಾ ತಂತ್ರಗಳ ಮೊರೆ ಹೋಗುತ್ತಿದ್ದಾರೆ.
ಹೌದು ,ಚುನಾವಣಾ ದಿನಾಂಕ ಸಮೀಪಿಸುತ್ತಿದೆ. ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ಬಿರುಸಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಯ ತಾಲೂಕಿಗೆ ಆಗಮಿಸಿದರು. ಈ ವೇಳೆ ಖರ್ಗೆಯವರನ್ನು ಸುಳ್ಯದಲ್ಲಿ ಅದ್ದೂರಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು.
ಹೆಲಿಕಾಪ್ಟರ್ ಮೂಲಕ ಸುಳ್ಯ ಎಂ.ಜಿ.ಎಂ. ಶಾಲಾ ಮೈದಾನಕ್ಕೆ ಬಂದ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.ಕಾಂಗ್ರೆಸ್ ನಿಂದ ಈ ಬಾರಿ ಅಭ್ಯರ್ಥಿಯಾಗಿರುವ ಜಿ. ಕೃಷ್ಣಪ್ಪ ಅವರ ಪ್ರಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಯಕ್ಕೆ ಆಗಮಿಸಿದ್ದು,ಈ ಮೂಲಕ ಜಿ.ಕೃಷ್ಣಪ್ಪ ಪರವಾಗಿ ಪ್ರಚಾರಕೈಗೊಂಡರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬೃಹತ್ ಸಮಾವೇಶದತ್ತ ಹೆಜ್ಜೆ ಹಾಕಿದ ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರು. ಈ ಸಲ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಹೋರಾಡಬೇಕಿದ್ದು ಕಷ್ಟಗಳೆಷ್ಟೇ ಇದ್ದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸುಭದ್ರ ಸರಕಾರ ಇರಬೇಕಾದ್ರೆ ಸುಳ್ಯದಲ್ಲಿ ಜಿ ಕೃಷ್ಣಪ್ಪ ಅವರನ್ನು ಬೆಂಬಲಿಸುವುದು ಕೂಡ ಅತೀ ಅಗತ್ಯವಿದೆ ಎಂದು ಕರೆ ನೀಡಿದರು.
ಸುಳ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಲವಾರು ವಿಚಾರಗಳನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರಕಾರ ಅತ್ಯಂತ ಭ್ರಷ್ಟ ಸರಕಾರ ಆಗಿದ್ದು ಶೇ.40ರಷ್ಟು ಕಮಿಷನ್ ಪಡೆಯುವ ಸರಕಾರವಾಗಿದೆ. ಇಂತಹವರಿಂದ ಜನ ಯಾವ ಅಭಿವೃದ್ಧಿಯನ್ನು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಇಂತಹ ಭ್ರಷ್ಟ ಸರಕಾರವನ್ನು ರಾಜ್ಯದಿಂದ ಕಿತ್ತೊಗೆಯಬೇಕಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.ದ.ಕ. ಜಿಲ್ಲೆಯಲ್ಲಿ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ತತ್ತರಿಸುತ್ತಿರುವ ರೈತರಿಗೆ ಸಹಾಯ ಮಾಡುವ ಸಲುವಾಗಿ ಈ ರೋಗದ ಸಂಶೋಧನೆಗೆ 50 ಕೋಟಿಯಿಂದ 100 ಕೋಟಿಯವರೆಗೆ ಖರ್ಚು ಮಾಡಿ ಪರಿಹಾರ ಹುಡುಕುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುಳ್ಯಕ್ಕೆ ಇದೇ ಮೊದಲ ಸಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು, ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರದ ಬಗ್ಗೆ ಮಾತನಾಡುತ್ತಿರುವಾಗಲೇ ಮಳೆ ಬರುವುದಕ್ಕೆ ಶುರುವಾಗಿದ್ದರಿಂದ ಖರ್ಗೆಯವರು ಇದು ಶುಭ ಸೂಚನೆ, ಗೆಲುವು ನಮ್ಮದೇ ಎಂದು ಸಭೆಯಲ್ಲಿ ತಿಳಿಸಿದರು.ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ಕರತಾಡನ ನಡೆಸಿ ಹರ್ಷ ವ್ಯಕ್ತಪಡಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕೃಷ್ಣಪ್ಪ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ಕುಮಾರ್ ರೈ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಸಭೆಯಲ್ಲಿ ಉಪಸ್ಥಿತರಿದ್ದರು.ಎಐಸಿಸಿಯ ದ.ಕ.ಜಿಲ್ಲಾ ವೀಕ್ಷಕಿ ಶಿಭಾ ರಾಮಚಂದ್ರನ್, ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಮಂಜುನಾಥ ಭಂಡಾರಿ, ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ,ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎಐಸಿಸಿ ವೀಕ್ಷಕರಾದ ಸುನಿಲ್ ಕೇದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ಮುಖಂಡ ಧನಂಜಯ ಅಡ್ಪಂಗಾಯ, ಎನ್.ಜಯಪ್ರಕಾಶ್ ರೈ, ಟಿ.ಎಂ.ಶಹೀದ್, ಡಾ.ರಘು, ಸದಾನಂದ ಮಾವಜಿ, ಸುಧೀರ್ ಕುಮಾರ್ ರೈ, ಕೆ.ಎಂ.ಮಸೂದ್, ಇಬ್ರಾಹಿಂ ಕೋಡಿಚ್ಚಾಲ್, ಕಾವು ಹೇಮನಾಥ ಶೆಟ್ಟಿ, ಶಾಲೆಟ್ ಪಿಂಟೋ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫಾ, ಹಮೀದ್ ಕುತ್ತಮೊಟ್ಟೆ, ಸರಸ್ವತಿ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.