ನ್ಯೂಸ್ ನಾಟೌಟ್: ಈ ಸಲ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಹೋರಾಡಬೇಕಿದ್ದು ಕಷ್ಟಗಳೆಷ್ಟೇ ಇದ್ದರೂ ಕಾಂಗ್ರೆಸ್ ಪಕ್ಷವನ್ನು ಈ ಸಲ ಅಧಿಕಾರಕ್ಕೆ ತರಲೇಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸುಭದ್ರ ಸರಕಾರ ಇರಬೇಕಾದ್ರೆ ಸುಳ್ಯದಲ್ಲಿ ಜಿ ಕೃಷ್ಣಪ್ಪ ಅವರನ್ನು ಬೆಂಬಲಿಸುವುದು ಕೂಡ ಅತೀ ಅಗತ್ಯವಿದೆ ಎಂದು ಸುಳ್ಯದಲ್ಲಿ ಕಾರ್ಯಕರ್ತರಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಸುಳ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಲವಾರು ವಿಚಾರಗಳನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರಕಾರ ಅತ್ಯಂತ ಭ್ರಷ್ಟ ಸರಕಾರ ಆಗಿದ್ದು ಶೇ.೪೦ರಷ್ಟು ಕಮಿಷನ್ ಪಡೆಯುವ ಸರಕಾರವಾಗಿದೆ. ಇಂತಹವರಿಂದ ಜನ ಯಾವ ಅಭಿವೃದ್ಧಿಯನ್ನು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಇಂತಹ ಭ್ರಷ್ಟ ಸರಕಾರವನ್ನು ರಾಜ್ಯದಿಂದ ಕಿತ್ತೊಗೆಯಬೇಕಿದೆ ಎಂದು ಖರ್ಗೆ ತಿಳಿಸಿದರು. ಕರಾವಳಿಯ ಬ್ಯಾಂಕ್ಗಳನ್ನು ಬಿಜೆಪಿಯವರು ಸ್ವಾರ್ಥಕ್ಕಾಗಿ ಮಾರಾಟ ಮಾಡಿದ್ದಾರೆ. ಇದರಿಂದಾಗಿ ಜನರಿಗೆ ಗೊಂದಲ ಸೃಷ್ಟಿಯಾಗಿದೆ. ಇಂದು ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಮಾಡಿದ್ದ ಒಳ್ಳೆಯ ಕೆಲಸವನ್ನೆಲ್ಲ ಬಿಜೆಪಿ ತನ್ನ ಆಡಳಿತದಲ್ಲಿ ಹಾಳು ಮಾಡಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.