ನ್ಯೂಸ್ ನಾಟೌಟ್ ಪುತ್ತೂರು: ಕಲೆಯ ಸಿದ್ದಿಗೆ ತಾಳ್ಮೆ ಎಂಬ ಪೋಷಕನ ಜೊತೆಗೆ ಗುರುವಿರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಕಲೆಗೆ ಭರತ ಮುನಿಯ ದೊಡ್ಡ ಕೊಡುಗೆಯಿದೆ. ಇದು ಕೇವಲ ಭೌತಿಕ ಅಭಿವ್ಯಕ್ತಿ ಮಾತ್ರ ಅಲ್ಲ. ಅಂತರಂಗದ ವಿಕಸನ ಮತ್ತು ಅರಳುವಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣ ಕಲಾಕೇಂದ್ರ ವೀರಮಂಗಳ ಇದರ 20ನೇ ವರ್ಷಾಚರಣೆ ಪ್ರಯುಕ್ತ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ವಿಂಶತಿ ನೃತ್ಯೋತ್ಸವ ಮತ್ತು ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಇವರ ನೃತ್ಯ ಗೀತಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಬಳಿಕ ವಿದ್ವಾನ್ ಗೋಪಾಲಕೃಷ್ಣ ಅವರಿಗೆ ಶಾಲು ಹೊದಿಸಿ ಸ್ವಾಮೀಜಿ ಸನ್ಮಾನಿಸಿದರು. ದೇವಳದ ಪ್ರಧಾನ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವುಡ, ವಿದುಷಿ ಶ್ರೀಮತಿ ಸುಮಾ ರಾಮಪ್ರಸಾದ್, ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಹಾಗೂ ರೂಪಲೇಖ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.