ನ್ಯೂಸ್ ನಾಟೌಟ್ : ಚುನಾವಣಾ ದಿನಾಂಕ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ಬಿರುಸಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.ಈ ನಿಟ್ಟಿನಲ್ಲಿ ಇಂದು ಬೆಳ್ತಂಗಡಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಗಮಿಸಿದ್ದರು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಸುಳ್ಯ ತಾಲೂಕಿಗೆ ಪ್ರಚಾರಕ್ಕೆ ಏ.25ಕ್ಕೆ ಆಗಮಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ.
ಸುಳ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನಿಂದ ಜಿ.ಕೃಷ್ಣಪ್ಪ ಅವರು ಕಣಕ್ಕಿಳಿಯುತ್ತಿದ್ದು,ಇತ್ತ ಕಾಂಗ್ರೆಸ್ ನಿಂದ ನಂದಕುಮಾರ್ ಕೂಡ ಟಿಕೇಟ್ ಆಕಾಂಕ್ಷಿಯಾಗಿದ್ದರು.ಹೀಗಾಗಿ ಸುಳ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ಸಿಗುತ್ತಿದ್ದಂತೆಯೇ ನಂದಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದರು.ಹಲವು ಬೆಳವಣಿಗೆಗಳ ನಂತರ ನಂದ ಕುಮಾರ್ ಅವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದರು.ಇದೀಗ ಕೆಪಿಸಿಸಿ ವತಿಯಿಂದ ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ನಂದಕುಮಾರ್ ಅವರನ್ನು ನೇಮಕಗೊಳಿಸಿದ್ದು,ಮತ್ತೆ ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಪಕ್ಷದ ವರಿಷ್ಠರಿಂದ ಆದೇಶ ಬಂದಿತ್ತು.
ಇತ್ತ ಸುಳ್ಯ ತಾಲೂಕು ಬಿಜೆಪಿ ಭದ್ರಕೋಟೆ.ಸತತ ಆರು ಬಾರಿ ಬಿಜೆಪಿಯಿಂದ ಗೆದ್ದು ಅಂಗಾರ ಅವರು ಶಾಸಕರಾಗಿದ್ದರು.ಸಚಿವರೂ ಆದರು.ಇದೀಗ ಬಿಜೆಪಿಯಿಂದ ಹೊಸ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗೂ ಕಾಂಗ್ರೆಸ್ ನಿಂದ ಕೃಷ್ಣಪ್ಪ ಅವರಿಗೆ ಟಿಕೆಟ್ ಲಭಿಸಿದೆ. ಕಾಂಗ್ರೆಸ್ ನಲ್ಲಿ ಈ ಬಾರಿಯ ಅಭ್ಯರ್ಥಿಯಾಗಿರುವ ಜಿ. ಕೃಷ್ಣಪ್ಪ ಅವರ ಪ್ರಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಆಗಮಿಸುತ್ತಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಏ.25ಕ್ಕೆ ಸುಳ್ಯಕ್ಕೆ ಬರುತ್ತಾರೆ ಅನ್ನುವ ಸುದ್ದಿಯೂ ಇದೆ.ಈ ಮೂಲಕ ಜಿ.ಕೃಷ್ಣಪ್ಪ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.