ನ್ಯೂಸ್ ನಾಟೌಟ್: ಪ್ರತಿಯೊಂದು ತಾಲೂಕಿಗೆ ಆಸ್ಪತ್ರೆ ಇರಬೇಕು. ಆಸ್ಪತ್ರೆ ಇದ್ದರೆ ಸಾಲದು ವೈದ್ಯರು ಕೂಡ ಇರಲೇಬೇಕು. ರಾಜ್ಯದ ವಿವಿಧ ಕಡೆ ತಾಲೂಕು ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕಡೆ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಇಲ್ಲ ಅನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿರುವಾಗ ಕಾರ್ಕಳದಲ್ಲಿ ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಬಡವರಿಗಾಗಿ ಕಟ್ಟಿಸಿರುವ ಈ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇದ್ದು ಆರ್ಥಿಕವಾಗಿ ಹಿಂದುಳಿದವರ ಪಾಲಿನ ಸಂಜೀವಿನಿಯಾಗಿದೆ.
ಈ ಸರಕಾರಿ ಆಸ್ಪತ್ರೆಯು ಸುಸಜ್ಜಿತವಾದ ಕಟ್ಟಡ, ಸ್ವಚ್ಛತೆಗೆ ಆದ್ಯತೆ, ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಅಲ್ಲದೆ ಜನರಿಗೆ ಅತೀ ಅಗತ್ಯದ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗಿದೆ. ತುರ್ತು ಸಮಯದಲ್ಲಿ ಅವಶ್ಯಕವಿರುವ ಆಮ್ಲಜನಕ ಉತ್ಪಾದಕ ಘಟಕವನ್ನು ಹೊಂದಲಾಗಿದೆ. ಇದಿಷ್ಟು ಸಾಮಾನ್ಯ ವಿಚಾರವಾದರೆ ಈ ಆಸ್ಪತ್ರೆ ಮತ್ತೊಂದು ಅತೀ ಮುಖ್ಯವಾದ ವಿಚಾರಕ್ಕೆ ಸುದ್ದಿಯಾಗಿದೆ. ಹೌದು, ತಾಲೂಕು ಆಸ್ಪತ್ರೆಗಳಲ್ಲೇ ವಿಭಿನ್ನವಾಗಿರುವ ಅತೀ ವಿರಳವಾಗಿರುವ ಮಕ್ಕಳ ತೀವ್ರ ನಿಗಾ (ಪಿಐಸಿಯು) ಘಟಕವನ್ನು ತೆರೆಯಲಾಗಿದೆ. ಇದೆಲ್ಲವನ್ನು ತನ್ನ ಆಡಳಿತದ ಅವಧಿಯಲ್ಲಿ ವಿ ಸುನಿಲ್ ಕುಮಾರ್ ಮಾಡಿಸಿರುವುದರಿಂದ ಸಹಜವಾಗಿಯೇ ಅವರ ಗೆಲುವಿಗೆ ವರದಾನ ಆಗಬಹುದು ಅನ್ನುವುದು ಜನರ ಅಭಿಪ್ರಾಯವಾಗಿದೆ.