ನ್ಯೂಸ್ ನಾಟೌಟ್ : ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ‘ಕೈ’ ಯನ್ನು ಹಿಡಿಯಲು ಹೊರಟ ಜಗದೀಶ್ ಶೆಟ್ಟರ್ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಮೂಲಕ ಕಳೆದ ಕೆಲದಿನಗಳಿಂದ ಎದ್ದಿರುವ ಗೊಂದಲಕ್ಕೆ ಪೂರ್ಣ ವಿರಾಮ ಹಾಕಿದರು.
ಈ ವೇಳೆ ಖರ್ಗೆ ಅವರು ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾನಾಡುತ್ತಾ ‘ಇಂದು ಬಹಳ ಸಂತಸದ ದಿನ.ಶ್ರೇಷ್ಠ,ಸರಳ,ಸಜ್ಜನಿಕೆಯ ಹಾಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿಕೊಂಡು ಬಂದಿರುವ ಒಬ್ಬ ರಾಜಕಾರಣಿ ನಮ್ಮ ಪಕ್ಷದಲ್ಲಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಜಗದೀಶ್ ಶೆಟ್ಟರ್ ಯೊಬ್ಬ ಉತ್ತಮ ನಾಯಕ. ಅವರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಶೆಟ್ಟರ್ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಸ್ವಾಗತಿಸುತ್ತೇನೆ ಎಂದರು.
ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್ ಕಳೆದ ಆರು ತಿಂಗಳಿನಿಂದ ನನ್ನನ್ನು ಬಿಜೆಪಿ ಕಡೆಗಣನೆ ಮಾಡಿದೆ.ನಾನು ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿ.ಜನರ ಪ್ರೀತಿಯೂ ನನ್ನ ಮೇಲಿತ್ತು.ಅವರ ಪ್ರೀತಿ ವಿಶ್ವಾಸದಿಂದಲೇ ನಾನು ಸಿ.ಎಂ ಆಗಿದ್ದೇನೆ.ಆದರೆ ಈ ಬಾರಿಯೂ ಟಿಕೇಟ್ ಸಿಗುವ ವಿಶ್ವಾಸವಿತ್ತು.ಮೊದಲೇ ನನಗೆ ಟಿಕೇಟ್ ಸಿಗದಿರುವ ಬಗ್ಗೆ ಮಾಹಿತಿ ನೀಡಿದ್ದರೆ ನನಗೆ ಬೇಜಾರಾಗುತ್ತಿರಲಿಲ್ಲ.ಆದರೆ ನನಗ್ಯಾವ ಮಾಹಿತಿ ನೀಡದೇ ಪಕ್ಷ ನನಗೆ ಬೇಜಾರು ಮಾಡಿದೆ.ಹೀಗಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಒಪ್ಪದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನಗೊಂಡು ಕಳೆದ ಎರಡು ದಿನಗಳಿಂದ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದಲ್ಲದೆ ತಮ್ಮ ಶಾಸಕ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡಿದ್ದರು.ಕೊನೆ ಕ್ಷಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಹ್ಲಾದ್ ಜೋಶಿ ಸೇರಿ ಜಗದೀಶ್ ಶೆಟ್ಟರ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರಾದರೂ ಕೂಡ ಅದು ಕಾರ್ಯ ಸಾಧ್ಯವಾಗಿರಲಿಲ್ಲ.