ನ್ಯೂಸ್ ನಾಟೌಟ್ : 50-60 ವರ್ಷವಾದ್ರೆ ಸಾಕು. ಹೆಚ್ಚಿನ ಮಂದಿ ನಮಗೆ ವಯಸ್ಸಾಯಿತು, ಮಂಡಿ ನೋವು, ಸೊಂಟ ನೋವು ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಹೇಳಿಕೊಂಡು ವೃದ್ಧಾಪ್ಯವೆಂದು ವಿಶ್ರಾಂತಿ ಪಡೆದುಕೊಳ್ಳುವುದುಂಟು. ಆದರೆ, ಕೊಡಗಿನ ಈ ಸಹೋದರರು ತದ್ವಿರುದ್ಧವಾಗಿದ್ದಾರೆ. 95 ಮತ್ತು 86ರ ವಯಸ್ಸಲ್ಲೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.
ಇಳಿವಯಸ್ಸಿನಲ್ಲೂ ಚಿನ್ನ ಗೆದ್ದು ಬೀಗಿದ ಅಪರೂಪದ ಘಟನೆಯಿದು.ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು, ಪಾಲೇಕಂಡ ಸಹೋದರರು ಕೊಡಗಿನ ಕಾಡನೂರಿಗೆ ಕೀರ್ತಿ ತಂದಿದ್ದಾರೆ. ಅಂದಹಾಗೆ ಇಬ್ಬರು ಈ ಸಾಧನೆ ಮಾಡಿದ್ದು, ಒಬ್ಬರಿಗೆ 95 ವರ್ಷ- ಮತ್ತೊಬ್ಬರಿಗೆ 86 ವರ್ಷ.ಪಾಳೇಕಂಡ ಬೋಪಯ್ಯ ಹಾಗೂ ಬೆಳ್ಳಿಯಪ್ಪ ಇಬ್ಬರು ಸಾಧನಾ ವ್ಯಕ್ತಿಗಳು. ಬೋಪಯ್ಯ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದರೆ, ಬೆಳ್ಳಿಯಪ್ಪ 1, 500 ಮೀಟರ್ ವಾಕಿಂಗ್ ರೇಸ್ ನಲ್ಲಿ ಚಿನ್ನ ಮತ್ತು 100 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದು ಕೀರ್ತಿ ತಂದಿದ್ದಾರೆ.ಇವರಿಬ್ಬರ ಈ ಸಾಧನೆ ನೋಡಿದ್ರೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದೆನಿಸುತ್ತದೆ.