ನ್ಯೂಸ್ ನಾಟೌಟ್ : ಮುಂಬಯಿನ ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ವೇಳೆ ಸಂಭವಿಸಿದ ಭೀಕರ ಬಸ್ ಅಪಘಾತ ದುರಂತದಲ್ಲಿ 13 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. ದುರಂತದಲ್ಲಿ 27 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಯಗಡ ಜಿಲ್ಲೆಯ ಹಳೆ ಮುಂಬಯಿ- ಪುಣೆ ಹೆದ್ದಾರಿಯಲ್ಲಿನ ಕಂದರಕ್ಕೆ ಬಸ್ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ.ಸಾಂಪ್ರದಾಯಿಕ ಸಂಗೀತ ತಂಡವೊಂದರ ಸದಸ್ಯರನ್ನು ಈ ಖಾಸಗಿ ಬಸ್ ಪುಣೆಯಿಂದ ಮುಂಬಯಿಗೆ ಕರೆದೊಯ್ಯುತ್ತಿತ್ತು. ಬೆಳಗಿನ ಜಾವ 4.50ರ ಸುಮಾರಿಗೆ ಹೆದ್ದಾರಿಯಲ್ಲಿನ ಶಿಂಗ್ರೋಬಾ ದೇವಸ್ಥಾನದ ಸಮೀಪ ಕಂದರವೊಂದಕ್ಕೆ ಬಸ್ ಉರುಳಿಬಿದ್ದಿದೆ ಎಂದು ಹೇಳಲಾಗಿದೆ.ಬಸ್ನಲ್ಲಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು.
ಮುಂಬಯಿಯ ಗೋರೆಗಾಂವ್ನ ‘ಬಜಿ ಪ್ರಭು ವಾದಕ್ ಗ್ರೂಪ್’ ಎಂಬ ಸಂಗೀತ ತಂಡದ ಸದಸ್ಯರನ್ನು ಬಸ್ ಕರೆದೊಯ್ಯುತ್ತಿತ್ತು. ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಈ ತಂಡವು ಗೋರೆಗಾಂವ್ಗೆ ಮರಳಿ ಬರುತ್ತಿತ್ತು. ಶನಿವಾರ ರಾತ್ರಿ 1 ಗಂಟೆಗೆ ಈ ತಂಡ ಸ್ಥಳದಿಂದ ಹೊರಟಿತ್ತು.ಮೃತರು ಮತ್ತು ಗಾಯಾಳುಗಳು 18- 25 ವರ್ಷ ವಯೋಮಿತಿಯವರಾಗಿದ್ದಾರೆ ಎಂದು ಹೇಳಲಾಗಿದೆ.
ಸ್ಥಳೀಯ ಪೊಲೀಸರ ತಂಡ ಹಾಗೂ ಚಾರಣಿಗರ ಗುಂಪು ಅಪಘಾತದ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮುಂಬಯಿಯಿಂದ ಸುಮಾರು 70 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.