ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಪೆಟ್ರೋಲ್ ಪಂಪ್ ಬಳಿ ನಡೆದಿರುವ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಭೀರ ಸ್ಥಿತಿಯಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಸದ್ಯ ಕಾರು ಅಪಘಾತದಲ್ಲಿ ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ. ಇಬ್ಬರನ್ನು ಕೆವಿಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗೆ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ಮಗುವಿನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸಾವಿಗೀಡಾದವರೆಲ್ಲ ಮಂಡ್ಯ ಮೂಲದ ಮಳವಳ್ಳಿಯವರೆಂದು ತಿಳಿದು ಬಂದಿದೆ.ಕಾರು ಸುಳ್ಯ ಕಡೆಯಿಂದ ಮಡಿಕೇರಿ ಮೂಲಕ ಮಂಡ್ಯಕ್ಕೆ ಪ್ರಯಾಣಿಸುತ್ತಿತ್ತು. ಬಸ್ ಮಡಿಕೇರಿ ಕಡೆಯಿಂದ ಸುಳ್ಯದ ಕಡೆಗೆ ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.