ನ್ಯೂಸ್ ನಾಟೌಟ್: ಕಳೆದ ಹಲವು ವರ್ಷಗಳಿಂದ ನಾನು ಕಾಡಾನೆಗಳ ಒಡನಾಟದ ಅನುಭವ ಹೊಂದಿದ್ದೇನೆ. ಅವುಗಳು ತುಂಬಾ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತವೆ. ಮರಿ ಆನೆ ಜತೆಗೆ ತಾಯಿ ಆನೆಗೆ ತುಂಬಾ ಬಾಂಡಿಂಗ್ ಇರುತ್ತದೆ. ಎಂತಹ ಸಂದರ್ಭದಲ್ಲೂ ತಾಯಿ ಆನೆ ಮರಿ ಆನೆಯನ್ನು ಬಿಟ್ಟುಕೊಡುವುದಿಲ್ಲ. ಆದರೆ ನೂರರಲ್ಲಿ ಶೇ.೧೦ರಷ್ಟು ಆನೆಗಳು ತಮ್ಮ ಸ್ವಭಾವದಲ್ಲಿ ಭಿನ್ನತೆ ಹೊಂದಿರುತ್ತದೆ. ಕೆಲವು ಸಲ ಮನುಷ್ಯನ ಸಂಪರ್ಕಕ್ಕೆ ಬಂದ ನಂತರ ಆನೆಗಳನ್ನು ಸ್ವೀಕರಿಸದೆಯೂ ಇರಬಹುದು ಎಂದು ನಿವೃತ್ತ ಫ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಫಾರೆಸ್ಟರ್ ಕರ್ನಾಟಕ ಸರಕಾರ (ಪಿಸಿಸಿಎಫ್ಒ) ಸಂಜಯ್ ಮೋಹನ್ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಬೆಂಗಳೂರಿನಿಂದ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅವರು, ಆನೆಗಳು ತುಂಬಾ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತದೆ. ಕೆಲವು ಸಲ ಅವುಗಳು ಸ್ವಾಭಾವಿಕವಾಗಿ ವರ್ತನೆಯನ್ನು ತೋರುತ್ತವೆ. ಮನುಷ್ಯನ ಸಂಪರ್ಕಕ್ಕೆ ಬಂದ ನಂತರ ಅವುಗಳು ಮರಿಗಳನ್ನು ದೂರ ಮಾಡುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು. ತಾಯಿ ಆನೆಯು ಮರಿ ಆನೆಯನ್ನು ದೂರ ಮಾಡಿದ್ದರೆ ಒಂದೆರಡು ದಿನ ಆನೆಗಳ ಹಿಂಡಿನ ಬಳಿ ಬಿಟ್ಟು ನೋಡಬೇಕು, ತಾಯಿ ಆನೆಯ ಜತೆ ಮರಿ ಆನೆಯನ್ನು ಸೇರಿಸುವುದಕ್ಕೆ ಪ್ರಯತ್ನ ಪಡಬೇಕು. ಹಾಗೆಯೂ ಸಾಧ್ಯವಾಗದಿದ್ದರೆ ಅದನ್ನುದುಬಾರೆ ಅಥವಾ ಆನೆ ರಕ್ಷಣಾ ಸ್ಥಳಗಳಿಗೆ ಕಳುಹಿಸುವ ಮಾರ್ಗವೊಂದೇ ಉಳಿದಿರುತ್ತದೆ ಎಂದು ತಿಳಿಸಿದರು.
ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ತಾಯಿ ಆನೆಯು ಮರಿ ಆನೆಯನ್ನು ತನ್ನ ಬಳಿ ಸೇರಿಸದಿರುವುದಕ್ಕೆ ಏನಾದರೂ ಸೂಕ್ಷ್ಮ ಕಾರಣಗಳಿವೆಯೇ? ಅನ್ನುವುದರ ಬಗ್ಗೆ ನ್ಯೂಸ್ ನಾಟೌಟ್ ತಜ್ಞರ ಮುಂದೆ ಪ್ರಶ್ನೆಗಳನ್ನು ಇರಿಸಿತ್ತು. ಈ ವಿಚಾರಕ್ಕೆ ಉತ್ತರಿಸಿದ ಅವರು, ಆನೆ ಕ್ಯಾಂಪ್ಗಳಲ್ಲಿ ಅನೇಕ ಆನೆಗಳು ಮರಿ ಇಟ್ಟಿವೆ. ಅವುಗಳನ್ನು ನಾವು ಮುಟ್ಟಿದ್ದೇವೆ. ನಾವು ಮುಟ್ಟಿದ ನಂತರವೂ ಮರಿ ಆನೆಯನ್ನು ತಾಯಿ ಆನೆ ಸ್ವೀಕರಿಸಿದೆ. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಹಾಗೆ ಇರುವುದಿಲ್ಲ. ಆನೆಗಳ ಸ್ವಭಾವದಲ್ಲೂ ಬದಲಾವಣೆ ಕಂಡು ಬರುತ್ತದೆ. ಅಪರೂಪದ ಪ್ರಕರಣಗಳಲ್ಲಿ ನಿರ್ಧಿಷ್ಟ ಕಾರಣಕ್ಕೆ ತಮ್ಮ ಮರಿಗಳನ್ನು ದೂರ ಮಾಡುವುದನ್ನು ನೋಡಿದ್ದೇವೆ ಎಂದು ತಿಳಿಸಿದರು.
ಮರಿ ಆನೆಯನ್ನು ಆನೆ ತನ್ನ ಬಳಿ ಸೇರಿಸಿಕೊಳ್ಳದಿದ್ದರೆ ಅದಕ್ಕೆ ಅಗತ್ಯವಾಗಿರುವಷ್ಟು ಹಾಲನ್ನು ಪೂರೈಸಬೇಕಾಗುತ್ತದೆ. ತಾಯಿಯಿಂದ ದೂರವಾದ ಬಳಿಕ ಅದು ಒಂದಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಬೇರೆ ದಾರಿ ಇಲ್ಲ ಎಂದು ತಿಳಿಸಿದರು. ಕೆಲವು ಕಾಡು ಪ್ರಾಣಿಗಳು ಮನುಷ್ಯನ ಸಂಪರ್ಕಕ್ಕೆ ಬಂದ ನಂತರ ತಮ್ಮ ಮರಿಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಅಂತಹ ಪ್ರಾಣಿಗಳಲ್ಲಿ ಮುಖ್ಯವಾಗಿ ನೋಡುವುದಾದರೆ ಚಿರತೆ ಕೂಡ ಒಂದು. ಚಿರತೆ ಮರಿಯನ್ನು ಒಂದು ಸಲ ಮನುಷ್ಯ ಕೈನಿಂದ ಮುಟ್ಟಿದ ಎಂದರೆ ಆ ಮರಿಯನ್ನು ತಾಯಿ ಚಿರತೆ ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಂಜಯ್ ಮೋಹನ್ ಸ್ಪಷ್ಟಪಡಿಸಿದರು.
ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಅದರಲ್ಲೂ ಕಾಡಾನೆಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಇತ್ತೀಚಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಆನೆಗಳು ಕೆಲವು ಸಲ ಮನುಷ್ಯನ ಸಂಪರ್ಕಕ್ಕೆ ಬಂದ ತನ್ನ ಮರಿಗಳನ್ನು ಒಟ್ಟಿಗೆ ಸೇರಿಸದೆಯೇ ಇರಲೂಬಹುದು. ತಾತ್ಕಾಲಿಕವಾಗಿ ಈ ರೀತಿಯ ವರ್ತನೆಯನ್ನು ತಾಯಿ ಆನೆ ತೋರಿಸಲೂಬಹುದು. ಆದರೆ ಮರಿಯನ್ನು ದೂರ ಮಾಡುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಅಜ್ಜಾವರದಲ್ಲಿ ಆಗಿರುವಂತಹ ಪ್ರಕರಣವು ತುಂಬಾ ವಿರಳವಾಗಿದೆ ಎಂದು ಕೊಡಗು ದುಬಾರೆಯ ಡಿಸಿಎಫ್ಒ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಪೂವಯ್ಯ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.