ನ್ಯೂಸ್ ನಾಟೌಟ್: ಮನುಷ್ಯ ಮುಟ್ಟಿದ ಎಂಬ ಒಂದೇ ಕಾರಣಕ್ಕೆ ತಾಯಿ ಆನೆಯೊಂದು ಮರಿಯಾನೆಯನ್ನು ತನ್ನ ಸನಿಹಕ್ಕೆ ಸೇರಿಸಿಕೊಳ್ಳದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ.
ಆನೆಗಳ ಹಿಂಡೊಂದು ಆಹಾರ ಅರಸುತ್ತಾ ಬಂದು ಅಜ್ಜಾವರದ ತುದಿಯಡ್ಕದ ಸಮೀಪದ ಸನತ್ ಕುಮಾರ್ ರೈ ಅವರಿಗೆ ಸೇರಿದ ತೋಟದ ಕೆರೆಗೆ ಬಂದು ಬಿದ್ದಿವೆ. ನಾಲ್ಕು ಆನೆಗಳ ಪೈಕಿ ತಾಯಿ ಆನೆ ಕೆರೆಯಿಂದ ಹೇಗೋ ಮೇಲಕ್ಕೆ ಎದ್ದಿದೆ. ಆದರೆ ಮರಿ ಆನೆ ಮತ್ತು ಮತ್ತೊಂದು ದೊಡ್ಡ ಹಾಗೂ ಸಣ್ಣ ಆನೆ ಕೆರೆಯಲ್ಲಿಯೇ ಬಾಕಿ ಆಗಿದ್ದವು, ಸ್ಥಳೀಯರ ಸಹಕಾರ ಹಾಗೂ ಅರಣ್ಯ ಇಲಾಖೆಯ ಸಮಯ ಪ್ರಜ್ಞೆಯಿಂದ ಆನೆಗಳನ್ನು ನೀರಿನಿಂದ ಮೇಲಕೆತ್ತುವ ಪ್ರಯತ್ನ ನಡೆಯಿತು. ತಡರಾತ್ರಿ ಬಿದ್ದಿದ್ದ ಕಾರಣಕ್ಕೆ ಆನೆಗಳು ತುಂಬಾ ಸುಸ್ತಾಗಿದ್ದವು. ಒಂದು ವರ್ಷದ ಪ್ರಾಯದ ಆನೆಮರಿ ಹಾಗೂ ಮೂರು ತಿಂಗಳ ಆನೆ ಮರಿ ನೀರಿನಲ್ಲಿ ಒದ್ದಾಟ ನಡೆಸುತ್ತಿದ್ದವು. ಕೊನೆಗೂ ಸ್ಥಳೀಯರ ಶ್ರಮದಿಂದ ಒಂದು ವರ್ಷ ಪ್ರಾಯದ ಆನೆ ಮರಿ ಹಾಗೂ ದೊಡ್ಡ ಆನೆಯನ್ನು ರಕ್ಷಿಸಲಾಯಿತು. ಆದರೆ ಮೂರು ತಿಂಗಳ ಮರಿ ಆನೆಗೆ ಕೆರೆಯಿಂದ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಊರಿನವರು ಹಗ್ಗ ಹಾಕಿ ಆನೆ ಮರಿಯನ್ನು ಮೇಲಕ್ಕೆ ಎಳೆದರು. ಈ ವೇಳೆ ಆನೆ ಮರಿಯನ್ನು ಕೈನಿಂದ ಸ್ಥಳೀಯರು ಮುಟ್ಟಿದ್ದಾರೆ. ಕೊನೆಗೆ ಆನೆ ಮರಿಯನ್ನು ತಾಯಿಯ ಸಮೀಪಕ್ಕೆ ಬಿಡುವ ಪ್ರಯತ್ನ ಮಾಡಿದ್ದಾರೆ, ಆದರೆ ತಾಯಿ ಆನೆ ಮರಿಯನ್ನು ಸನಿಹಕ್ಕೆ ಸೇರಿಸಿಕೊಳ್ಳಲಿಲ್ಲ. ಇದರಿಂದ ದಿಕ್ಕು ತಪ್ಪಿದಂತಾಗಿರುವ ಆನೆ ಮರಿ ಇದೀಗ ಸ್ಥಳೀಯರೊಬ್ಬರ ರಬ್ಬರ್ ತೋಟದಲ್ಲಿ ಅನಾಥವಾಗಿ ಘೀಳಿಡುತ್ತಾ ನಿಂತಿದೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಒಂದು ಕಡೆ ತಾಯಿ ಆನೆ ಮರಿಯನ್ನು ಬಿಟ್ಟು ಹೋಗುವ ಸ್ಥಿತಿಯಲ್ಲಿ ಇಲ್ಲ. ಆದರೆ ಮರಿ ಆನೆಯನ್ನು ಮನುಷ್ಯ ಮುಟ್ಟಿದ ಕಾರಣಕ್ಕೆ ಅದು ನಿರಾಕರಿಸುತ್ತಿದೆ. ತಾಯಿ ಪ್ರೀತಿಯ ಹೃದಯ ಕಲ್ಲಾಗಿದೆ ಈಗ ಎಂದು ಸ್ಥಳೀಯರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ತಬ್ಬಲಿಯಾದ ಮೂರು ತಿಂಗಳ ಮರಿ ಆನೆ
ತಾಯಿ ಹಾಲು ಸಿಗದೆ ಮೂರು ತಿಂಗಳ ಮರಿ ಆನೆ ರಬ್ಬರ್ ತೋಟದಲ್ಲಿ ಒಂಟಿಯಾಗಿದೆ. ಸರಿಯಾಗಿ ಆಹಾರವೂ ಅದಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ತಾಯಿಯಿಂದ ದೂರವಾಗಿರುವ ಆನೆ ಮರಿಗೆ ಈಗ ಆಸರೆಯ ಅಗತ್ಯವಿದೆ. ಸದ್ಯ ಮನುಷ್ಯರನ್ನು ಕಂಡರೆ ಆಪ್ತರಂತೆ ವರ್ತಿಸುತ್ತಿರುವ ಆನೆ ಮರಿ ಸ್ಥಳೀಯರನ್ನು ಹಿಂಬಾಲಿಸಿಕೊಂಡು ಅವರ ಜತೆ ಬರುವ ಪ್ರಯತ್ನ ನಡೆಸಿದೆ ಅನ್ನುವ ಮಾಹಿತಿಯೂ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.