ನ್ಯೂಸ್ ನಾಟೌಟ್: ವಿಧಾನಸಭಾ ಚುನಾವಣೆ ಟಿಕೇಟ್ ಹಂಚಿಕೆಯ ವಿಚಾರ ಬಹಳಷ್ಟು ಚರ್ಚೆಯಲ್ಲಿದೆ. ಅದರಲ್ಲೂ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಾತಿಯದ್ದೇ ಮಾತಾಗಿದೆ.
ಸುಳ್ಯ ತಾಲೂಕಿನಲ್ಲಿ ಒಕ್ಕಲಿಗ ಗೌಡ ಸಮುದಾಯದ ಪ್ರಾಬಲ್ಯವೇ ಹೆಚ್ಚು. ಒಕ್ಕಲಿಗ ಸಮುದಾಯದಿಂದ ಹಲವಾರು ನಾಯಕರು ರಾಜಕೀಯವಾಗಿ ಬಹಳಷ್ಟು ಬೆಳೆದಿದ್ದಾರೆ. ಶೈಕ್ಷಣಿಕವಾಗಿಯೂ ಒಕ್ಕಲಿಗ ಗೌಡ ಸಮುದಾಯದ ಜನ ಇಲ್ಲಿ ಪ್ರಬಲರಾಗಿದ್ದಾರೆ. ಸುಳ್ಯ ಶೈಕ್ಷಣಿಕವಾಗಿಯೂ ಕ್ರಾಂತಿಯನ್ನು ಕಂಡಿದೆ. ಕುರುಂಜಿ ವೆಂಕಟರಮಣ ಗೌಡರು ಕಟ್ಟಿದ ವಿದ್ಯಾ ಕಾಶಿಗೆ ರಾಷ್ಟ್ರಮಟ್ಟದ ಹೆಸರಿದೆ. ಸುಳ್ಯ ಇಷ್ಟು ಮುಂದುವರಿದಿದ್ದರೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾತಿ ಅನ್ನುವ ಹಣೆಪಟ್ಟಿ ಕಳೆದ ಹಲವಾರು ವರ್ಷಗಳಿಂದ ಇದೆ. ಅದರಿಂದ ಹೊರಬಂದು ಸಾಮಾನ್ಯ ಕ್ಷೇತ್ರವಾಗಿ ಏಕೆ ಪರಿಗಣಿಸಬಾರದು? ಅನ್ನುವ ಕೂಗುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತವಾಗುತ್ತಿದೆ.
ಸಮುದಾಯದ ಧ್ವನಿಯಿಲ್ಲ..!
ಮೀಸಲಾತಿಯನ್ನು ತೆಗೆದು ಹಾಕಬೇಕಿದ್ದರೆ ಜನರ ಅಭಿಪ್ರಾಯ ಹಾಗೂ ಒತ್ತಾಯ ಕೂಡ ಬಹಳ ಮುಖ್ಯವಾಗುತ್ತದೆ. ಸುಳ್ಯದಲ್ಲಿ ಬಹು ಸಂಖ್ಯೆಯಲ್ಲಿರುವವರು ಒಕ್ಕಲಿಗ ಗೌಡ ಸಮುದಾಯದವರು. ಅರೆಭಾಷೆ ಮಾತನಾಡುವ ಜನರು. ಇದುವರೆಗೆ ತಮ್ಮ ಸಮುದಾಯದ ನಾಯಕ ಸುಳ್ಯಕ್ಕೆ ಬೇಕು ಎಂದು ಹಕ್ಕೊತ್ತಾಯದಿಂದ ಕೇಳಿಲ್ಲ. ಯಾವುದೇ ಒತ್ತಾಯವನ್ನೂ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಪ್ರತಿಭಟನೆ ಮಾಡುವ, ತಮಗೆ ಬೇಕಾದ್ದನ್ನು ಸರಕಾರದ ಎದುರು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಜನ ಮಾತ್ರ ಅಭಿವೃದ್ಧಿ ಆಗಿಲ್ಲ. ರಸ್ತೆ ಸರಿ ಆಗಿಲ್ಲ, ಅದಾಗಿಲ್ಲ- ಇದಾಗಿಲ್ಲ ಅನ್ನುವ ನೋವನ್ನು ತೋಡಿಕೊಳ್ಳುತ್ತಲೇ ಇದ್ದಾರೆ. ಆದರೆ ಸಮುದಾಯದ ಜನಕ್ಕೆ ಅವಕಾಶ ಬೇಕು, ಮೀಸಲಾತಿಯನ್ನು ಸುಳ್ಯದಿಂದ ಕಿತ್ತೊಗೆಯಿರಿ ಅನ್ನುವಂತಹ ಹಕ್ಕೊತ್ತಾಯವನ್ನು ಇದುವರೆಗೆ ಮಾಡಿಲ್ಲ.
೨೦೦೮ ಮೀಸಲಾತಿಯನ್ನು ಚೇಂಜ್ ಮಾಡುವ ಅವಕಾಶವಿತ್ತು. ಆದರೆ ಅದು ಕೂಡ ವಿವಿಧ ಕಾರಣಗಳಿಂದ ಮೂಲೆಗೆ ಬಿತ್ತು. ಹೀಗಾಗಿ ಸುಳ್ಯ ತನ್ನ ಅಸ್ತಿತ್ವವನ್ನು ಕಂಡ ಬಳಿಕ ಮೀಸಲಾತಿ ಬಿಟ್ಟರೆ ಬೇರೆ ಭಾಗ್ಯವನ್ನೇ ಕಂಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ವಿವಿಧ ಮತದ ಜನರಿದ್ದರೂ ಮೀಸಲಾತಿ ಹಣೆಪಟ್ಟಿ ಹಾಗೆಯೇ ಇದೆ. 2028 ಕ್ಕೆ ಇದು ಸರಿಯಾಗುವ ನಿರೀಕ್ಷೆ ಇದೆ.