ನ್ಯೂಸ್ ನಾಟೌಟ್: ತ್ರಿಪುರಾದಲ್ಲಿ ವಿಷಕಾರಿ ಅಣಬೆಯನ್ನು ಸೇವಿಸಿ ಒಂದೇ ಕುಟುಂಬದ ಐದು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಕುಟುಂಬಸ್ಥರು ಕಾಡು ಅಣಬೆಯ ಪದಾರ್ಥವನ್ನು ಮಾಡಿ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ಬುಡಕಟ್ಟು ಜನಾಂಗದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲೆಯ ಬಿಶ್ರಾಮ್ ಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮೂರು ವರ್ಷದ ಮಗು ಸೇರಿದಂತೆ ಇತರರ ಸ್ಥಿತಿ ತೀರಾ ಹದಗೆಟ್ಟಾಗ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಗೋವಿಂದ್ ಬಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರತಿ ವರ್ಷ ಈಶಾನ್ಯ ರಾಜ್ಯಗಳಲ್ಲಿ ಕಾಡು ಅಣಬೆಗಳನ್ನು ಸೇವಿಸಿದ ನಂತರ ಅನೇಕ ಜನರು, ಹೆಚ್ಚಾಗಿ ಬುಡಕಟ್ಟು ಜನಾಂಗದವರು ಸಾಯುತ್ತಾರೆ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಬಳಕೆಗೆ ಅಸುರಕ್ಷಿತವಾಗಿರುವ ಕಾಡು ಅಣಬೆಗಳನ್ನು ಸ್ಥಳೀಯ ಜನರು ಗುರುತಿಸಲು ಸಾಧ್ಯವಾಗದೆ ಸೇವಿಸುತ್ತಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.