ನ್ಯೂಸ್ ನಾಟೌಟ್ : ಅಕ್ರಮವಾಗಿ ಖರೀದಿಸಿದ ಗೋಮಾಂಸವನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದಾಗ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ.ಪೊನ್ನಂಪೇಟೆ ತಾಲೂಕಿನ ಭದ್ರಗೊಳ ಗ್ರಾಮದ ನಿವಾಸಿಗಳಾಗಿರುವ ಎಂ.ಕೆ. ಹಂಸ (32) ಮತ್ತು ರಫೀಕ್ (33) ಬಂಧಿತರು.
ಚುನಾವಣೆಯ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿ ವಾಹನಗಳನ್ನು ತಪಾಸಣೆ ಕಾರ್ಯ ಕೈಗೊಂಡಿದ್ದರು.ಈ ವೇಳೆ ಪೊನ್ನಂಪೇಟೆ ಭದ್ರಗೊಳ ಗ್ರಾಮದ ನಿವಾಸಿಗಳಾದ ಎಂ.ಕೆ ಹಂಸ ಮತ್ತು ರಫೀಕ್ ತಮ್ಮ ವಾಹನದ ಮೂಲಕ ಕೇರಳ ರಾಜ್ಯದಿಂದ ವಿರಾಜಪೇಟೆ ಮಾರ್ಗವಾಗಿ ಪೊನ್ನಂಪೇಟೆಗೆ ತೆರಳುತಿದ್ದರು.ವಾಹನಗಳನ್ನು ತಪಾಸಣೆಗೆ ಒಳಪಡಿಸಿದಾಗ ಇದು ಬೆಳಕಿಗೆ ಬಂದಿದೆ.
ವಾಹನದಲ್ಲಿರಿಸಲಾಗಿದ್ದ ಕೈಚೀಲವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ12 ಕೆ.ಜಿ ಗೋಮಾಂಸ ಪತ್ತೆಯಾಗಿದೆ. ಕೇರಳ ರಾಜ್ಯದ ಇರಿಟ್ಟಿಯಿಂದ ಗೋಮಾಂಸವನ್ನು ಖರೀದಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಮಾಂಸ ಸಾಗಿಸಲಾಗಿದೆ ಎಂದು ತನಿಖೆಯ ವೇಳೆಯಲ್ಲಿ ಬಂಧಿತರು ತಿಳಿಸಿದ್ದಾರೆ. ಬಂಧಿತರ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ರಾಜ್ಯ ಗೋಮಾಂಸ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.