ನ್ಯೂಸ್ನಾಟೌಟ್: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವ ಏ.10ರಂದು ಆರಂಭಗೊಂಡು 20ರವರೆಗೆ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಳದ ಪುಷ್ಕರಣಿಯಲ್ಲಿ ಶಿಲಾಮಯ ಕಟ್ಟೆಯ ಕಾಮಗಾರಿ ಶನಿವಾರ ಸಂಪೂರ್ಣಗೊಳ್ಳಲಿದೆ. ಧ್ವಜಾರೋಹಣದ ಮೊದಲ ದಿನ ಸಂಜೆ ವಾಸ್ತುಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯಲಿದ್ದು, ಧ್ವಜಾರೋಹಣದ ಬಳಿಕ ಪುಷ್ಕರಣಿಯ ತಳಭಾಗದ ವರುಣ ದೇವರಿಗೆ ಸಾಮೂಹಿಕ ವರುಣ ಪೂಜೆ ನಡೆಯಲಿದೆ. ಭಕ್ತರಿಗೆ ವೀಕ್ಷಣೆ, ಸೇವಾ ಪೂಜೆಗೆ ಅವಕಾಶವಿದೆ ಎಂದರು.
ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಏಪ್ರಿಲ್ 8ರಂದು ಮಧ್ಯಾಹ್ನ 3.30ಕ್ಕೆ ದರ್ಬೆ ವೃತ್ತ ಹಾಗೂ ಬೊಳುವಾರು ಸುಬ್ರಹ್ಮಣ್ಯ ನಗರದಿಂದ ಹಸಿರುವಾಣಿ ಮೆರವಣಿಗೆಗೆ ಆರಂಭವಾಗಲಿದೆ. ಕೊಂಬು, ಕಹಳೆ, ಕುಣಿತ ಭಜನೆ ಮೆರವಣಿಗೆಗೆ ಮೆರುಗು ತುಂಬಲಿದ್ದು ಧಾರ್ಮಿಕ ಶಿಕ್ಷಣ ಪಡೆಯುವ 15 ಕೇಂದ್ರಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. 7 ಲಕ್ಷ ರೂ.ವೆಚ್ಚದಲ್ಲಿ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ಪ್ರತಿ ದಿನ 12.30ರಿಂದ ಮಧ್ಯಾಹ್ನ 3 ಗಂಟೆ ತನಕ ಅನ್ನಸಂತರ್ಪಣೆ ನೆರವೇರಲಿದೆ. ಇದಕ್ಕಾಗಿ 500 ಸ್ವಯಂಸೇವಕರು ಆಯೋಜಿಸಲಾಗಿದೆ ಎಂದರು.
ಏಪ್ರಿಲ್ 17ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಥ ಎಳೆಯುವವರು ಪಂಚೆ, ಶಲ್ಯ ಒಳಗೊಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ ಬರಬೇಕು. ವರುಣ ದೇವರಿಗೆ ಪೂಜೆ ಸಲ್ಲಿಸುವವರು ಕೂಡ ಸಾಂಪ್ರದಾಯಿಕ ಉಡುಗೆ ತೊಟ್ಟು ಬರಬೇಕು ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.
ಸಂಜೆ 5ರಿಂದ ರಾತ್ರಿ 11ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆಗೆ ಒಂದೇ ಪೆಂಡಾಲ್ ಬಳಸಲಾಗುವುದು. ಸದಸ್ಯ ರಾಮಚಂದ್ರ ಕಾಮತ್ ಮಾತನಾಡಿ, 2 ಜೈಂಟ್ ವ್ಹೀಲ್ ಸೇರಿ 250 ಮಳಿಗೆಗಳು ಇರಲಿದ್ದು ಮಳಿಗೆಗಳನ್ನು ಕಡಿಮೆ ಬಿಡ್ಗೆ ನೀಡಲಾಗಿದೆ. 9ರಂದು ಬೆಳಿಗ್ಗೆ 7ರಿಂದ 10ರ ತನಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸದಸ್ಯ ಶೇಖರ ನಾರಾವಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ವೀಣಾ ಬಿ.ಕೆ. ಮತ್ತಿತರರಿದ್ದರು.