ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ದೇಶ ಕಾಯುವ ಸೈನಿಕನ ಮನೆಗೆ ರಸ್ತೆ ಹಾಗೂ ಕರೆಂಟ್ಗೆ ಅವಕಾಶ ನೀಡದಿರುವ ಸುದ್ದಿ ಈಗ ವೈರಲ್ ಆಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕಡಬ ತಾಲೂಕಿನ ಮರ್ದಳದ ಕಂಪಮನೆಯ ಯೋಧನ ನೆರವಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ನೆರವಿಗೆ ಧಾವಿಸಿದೆ. ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ ಬೆಂಗಳೂರಿನಿಂದ ಕಡಬಕ್ಕೆ ಆಗಮಿಸಿದ್ದಾರೆ. ಇವರೊಂದಿಗೆ ಸೈನಿಕರ ಸಂಘದ ವೇಣು ಬೆಂಗಳೂರು ಜಿಲ್ಲಾಧ್ಯಕ್ಷರು, ಸೋಮಣ್ಣ ಕೊಡಗು ಜಿಲ್ಲಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ಉಪಾಧ್ಯಕ್ಷರು ಪ್ರಸಾದ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಕಡಬ ಕಂಪಮನೆಯ ಸಮೀಪ ಪ್ರತಿಭಟನೆ ನಡೆಸಿದರು.
ಏನಿದು ಘಟನೆ?
ಹಾಲಿ ಹಿಮಾಚಲ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯ ಸೈನ್ಯದ ಮದ್ರಾಸ್ ಎಂಜಿನೀಯರಿಂಗ್ ಗ್ರೂಪ್ ನ ಯೋಧ ಪುರುಷೋತ್ತಮ್ ಕಡಬದಲ್ಲಿ ಒಂದು ಮನೆ ಕಟ್ಟಿಕೊಂಡಿದ್ದರು. ಈ ಮನೆಗೆ ಕರೆಂಟ್ ಹಾಗೂ ರಸ್ತೆಯ ವಿಚಾರದ ಬಂದಾಗ ಪಕ್ಕದಲ್ಲಿರುವ ಎರಡು ಮನೆಯವರು ತಕರಾರು ಎತ್ತಿದ್ದಾರೆ. ಒಂದು ಮನೆಯವರು ರಸ್ತೆ ಹಾಗೂ ಕರೆಂಟ್ ಎರಡನ್ನೂ ನೀಡುವುದಿಲ್ಲ ಎಂದು ಹೇಳಿದ್ದರೆ ಇನ್ನೊಂದು ಮನೆಯವರು ಕರೆಂಟ್ ನೀಡುವುದಿಲ್ಲ ಎಂದಿದ್ದಾರೆ.
ಈ ಒಂದು ಕಾರಣಕ್ಕೆ ಪುರುಷೋತ್ತಮ್ ಅವರ ಮನೆ ಕಳೆದ ಏಳು ವರ್ಷದಿಂದ ಗೃಹ ಪ್ರವೇಶವಾಗದೆ ಹಾಗೆಯೇ ಉಳಿದಿದೆ. ದೇಶ ಕಾಯುವ ಯೋಧನಿಗಾದ ಪರಿಸ್ಥಿತಿಯ ಬಗ್ಗೆ ನ್ಯೂಸ್ ನಾಟೌಟ್ ಕನ್ನಡ ವೆಬ್ ಸೈಟ್ ನಲ್ಲಿ ‘ದೇಶ ಕಾಯುವ ಸೈನಿಕನ ಮನೆಗೆ ರಸ್ತೆಯಿಲ್ಲ ಹಾಗೂ ಕರೆಂಟಿಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಸೆಪ್ಟೆಂಬರ್ 15 ರಂದು ವರದಿ ಮಾಡಿತ್ತು. ಈ ಬೆನ್ನಲ್ಲೇ ಸೈನಿಕ ಸಂಘದವರು ಕಡಬದಲ್ಲಿ ಅದೇ ದಿನ ಬೆಳಗ್ಗೆ ಪ್ರತಿಭಟನೆಯನ್ನೂ ನಡೆಸಿದ್ದವು.
ಸರಕಾರಕ್ಕೆ ಗಡುವು
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಕಡಬ ತಹಶೀಲ್ದಾರ್ ಗೆ ಮನವಿ ನೀಡಲಾಯಿತು. ಕೂಡಲೇ ಸೈನಿಕನ ಸಮಸ್ಯೆಯನ್ನು ಬಗೆಹರಿಸಬೇಕು. ಮುಂದಿನ ಹದಿನೈದು ದಿನದೊಳಗೆ ಸರಿಪಡಿಸದಿದ್ದಲ್ಲಿ ಬೃಹತ್ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ದೇಶ ಕಾಯುವ ಸೈನಿಕನಿಗೆ ಈ ಗತಿ ಬಂದರೆ ಹೇಗೆ? ರಸ್ತೆ ಹಾಗೂ ವಿದ್ಯುತ್ ಸಂಪರ್ಕ ನೀಡದಿರುವ ಜನಪ್ರತಿನಿಧಿಗಳು ಇಷ್ಟು ದಿನದಿಂದ ಏನು ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಆಲಿಸಿ ಸರಿಪಡಿಸಬೇಕಿರುವ ನೀವುಗಳು ಓಟು ಕೊಟ್ಟ ಜನಗಳ ಗೋಳು ಕೇಳುವುದು ಯಾವಾಗ? ನಿಮಗೆ ಕಿಂಚಿತ್ತಾದರೂ ದೇಶದ ಸೈನಿಕರ ಬಗ್ಗೆ ಗೌರವವಿದ್ದರೆ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ಸೈನಿಕರ ಕುಟುಂಬ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.
ಶಿವಣ್ಣ ಎನ್.ಕೆ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ