ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಗೋಳಿತೊಟ್ಟಿನಿಂದ ಕೊಕ್ಕಡ, ಧರ್ಮಸ್ಥಳ ಸಂಪರ್ಕಿಸುವ ಹದಗೆಟ್ಟ ರಸ್ತೆಯನ್ನು ಸರಿಪಡುವ ವಿಚಾರವಾಗಿ ಸಚಿವ ಎಸ್.ಅಂಗಾರ ದಿವ್ಯ ಮೌನ ವಹಿಸಿದ್ದಾರೆ. ದಿನಾಂಕ 10-9-2021 ರಂದು ಸಂಜೆ “ಸಚಿವ ಅಂಗಾರರೇ ಕೂಡಲೇ ಗೋಳಿತೊಟ್ಟು- ಕೊಕ್ಕಡ ರಸ್ತೆ ಸರಿಪಡಿಸಿ, ಜನರ ಜೀವ ಉಳಿಸಿ” ಎಂಬ ತಲೆ ಬರಹದಡಿ ನ್ಯೂಸ್ ನಾಟೌಟ್ ಕನ್ನಡ ವೆಬ್ಸೈಟ್ ನಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಕೊಕ್ಕಡ ಜಿಲ್ಲಾಸ್ಪತ್ರೆಯನ್ನೇ ನಂಬಿರುವ ಊರಿನ ಸಾವಿರಾರು ಜನ. ಇತಿಹಾಸ ಪ್ರಸಿದ್ಧ ಸೌತಡ್ಕ, ಧರ್ಮಸ್ಥಳ ದೇವಸ್ಥಾನಕ್ಕೆ ತೆರಳುವ ಪ್ರವಾಸಿಗರು, ನಾಲ್ಕು ಗ್ರಾಮ ಸಂಪರ್ಕಿಸುವ ರಸ್ತೆ ಪೂರ್ಣವಾಗಿ ಹಾಳಾಗಿದೆ. ಕೂಡಲೇ ಸರಿಪಡಿಸಿ ಜನರ ಜೀವನಕ್ಕೆ ಸುಗಮ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿತ್ತು.
ಕರೆ, ಮೆಸೇಜ್ಗೆ ಕ್ಯಾರೆ ಅನ್ನದ ಸಚಿವರು..!
ಗೋಳಿತೊಟ್ಟು ಜನರಿಂದಲೂ ಮತ ಪಡೆದಿರುವ ಸಚಿವ ಎಸ್. ಅಂಗಾರ ಅವರನ್ನು ನ್ಯೂಸ್ ನಾಟೌಟ್ ಸಂಪರ್ಕಿಸಲು ಹಲವು ಸಲ ಪ್ರಯತ್ನ ಪಟ್ಟಿದೆ. ಮೊದಲ ಸಲ ಕರೆ ಮಾಡಿದಾಗ ಮಾತನಾಡಿದ್ದ ಅಂಗಾರರು ಸೋಮವಾರ ಮಾತನಾಡುತ್ತೇನೆ ಎಂದಿದ್ದರು. ಆದರೆ ಸೋಮವಾರ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಿಲ್ಲ. ಆ ಬಳಿಕ ಹಲವು ಸಲ ನ್ಯೂಸ್ ನಾಟೌಟ್ ತಂಡ ಕರೆ ಮಾಡಿದಾಗಲೂ ಅದನ್ನೂ ಸ್ವೀಕರಿಸಲಿಲ್ಲ. ನಂತರ ವಾಟ್ಸಪ್ ಸಂದೇಶ ಕಳಿಸಿದರೂ ಅವರು ಅದನ್ನು ನೋಡಿ ಸುಮ್ಮನಾಗಿದ್ದಾರೆ.
ಅಧಿಕಾರಿಗಳನ್ನಾದರೂ ಕಳಿಸಬಹುದಲ್ವಾ?
ಸಚಿವರು ಜವಾಬ್ದಾರಿಯುತ ಹುದ್ಧೆಯಲ್ಲಿರುವುದರಿಂದ ಅವರನ್ನು ಕೇಳುತ್ತೇವೆ. ಅದಕ್ಕೆ ಅವರು ಉತ್ತರಿಸಬೇಕಿರುವುದು ಕರ್ತವ್ಯ. ಸದ್ಯ ಅವರು ದೂರವಾಣಿಗೂ ಸಿಗದಿರುವಷ್ಟು ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಒಂದು ದೂರವಾಣಿ ಕರೆ ಮಾಡಿ ಅಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳನ್ನಾದರೂ ಸ್ಥಳಕ್ಕೆ ಕಳಿಸಬಹುದಿತ್ತು. ಅದನ್ನು ಕೂಡ ಮಾಡಲು ಮನಸ್ಸು ಮಾಡದಿರುವುದು ತೀವ್ರ ಬೇಸರ ತರಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
108 ambulance ತೆರಳುತ್ತಿಲ್ಲ
ಜನರಿಗೆ ತುರ್ತಾಗಿ ಬೇಕಾಗಿರುವುದು ಆರೋಗ್ಯ ಸೇವೆ. ಕಳೆದ ಕೆಲವು ದಿನಗಳಿಂದ ಈ ರಸ್ತೆಯಲ್ಲಿ 108 ambulance ಕೂಡ ತೆರಳುತ್ತಿಲ್ಲ. ಸ್ವತಃ ಈ ವಿಚಾರವನ್ನು ಸ್ಥಳೀಯರು ತಿಳಿಸಿದ್ದಾರೆ. ಎಂಡೋ ಸಲ್ಫನ್ ಪೀಡಿತರು, ವೃದ್ಧರು, ಗರ್ಭಿಣಿಯರು ಅಶಕ್ತರಿಗೆ ಆಸ್ಪತ್ರೆಗೆ ಹೋಗುವುದಕ್ಕೂ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿರುವ ರಸ್ತೆ ರಿಪೇರಿಗೆ ಸಚಿವರು ಯಾಕೆ ಮನಸ್ಸು ಮಾಡುತ್ತಿಲ್ಲ ಅನ್ನುವುದು ಜಿಜ್ಞಾಸೆಗೆ ಕಾರಣವಾಗಿದೆ.’
ಪ್ರತಿಭಟನೆಯ ಎಚ್ಚರಿಕೆ
ಸಚಿವರು ಈ ಕೂಡಲೇ ಭೇಟಿ ನೀಡಿ ರಸ್ತೆಯನ್ನು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಸ್ತೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಪಕ್ಷ ಭೇದ ಮರೆತು ಊರಿನವರೆಲ್ಲ ಸೇರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.