ನ್ಯೂಸ್ ನಾಟೌಟ್: ಚುನಾವಣೆ ಸಮೀಪಿಸುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸೆಕ್ಸ್ ಬಾಂಬ್ ಸಿಡಿದಿದೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಕಮ್ ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರು ಮಹಿಳೆಯೊಬ್ಬರ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬೆನ್ನಲ್ಲೇ ಸಂಜೀವ ಮಠಂದೂರು ತೇಜೋವಧೆಗೆ ಈ ಫೋಟೋವನ್ನು ಹರಿಯಬಿಡಲಾಗುತ್ತಿದೆ ಅನ್ನುವ ಆಕ್ರೋಶವೂ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ನ್ಯೂಸ್ ನಾಟೌಟ್ ತಂಡವು ಸತ್ಯಾಸತ್ಯತೆಯನ್ನು ಅರಿಯುವ ಸಲುವಾಗಿ ಸಂಜೀವ ಮಠಂದೂರು ಅವರನ್ನು ಸಂದರ್ಶನ ನಡೆಸಿದೆ. ನಮ್ಮ ನೇರ ಪ್ರಶ್ನೆಗೆ ಅವರು ಅಷ್ಟೇ ನೇರವಾಗಿ ಉತ್ತರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ಓದಿ.
*ಮಹಿಳೆಯೊಬ್ಬರ ಜತೆ ನಿಮ್ಮ ಫೋಟೋಗಳು ವೈರಲ್ ಆಗುತ್ತಿದೆ. ಈ ಆರೋಪದ ಸತ್ಯಾಸತ್ಯತೆ ಏನು?
ಚುನಾವಣೆ ಸಮೀಪಿಸುತ್ತಿದೆ. ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಈ ವೇಳೆ ಕೆಲವು ಕಿಡಿಗೇಡಿಗಳು ಫೋಟೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದೇನೆ.
*ಪುತ್ತೂರಿಗೆ ಅಮಿತ್ ಶಾ ಬಂದಂತಹ ಸಂದರ್ಭದಲ್ಲಿ ‘ಅಣಬೆ ಕೊಡೆ’ ವಿವಾದ ಎದ್ದಿತ್ತು, ಈಗ ಆ ದ್ವೇಷ ಸಾಧಿಸಿ ಯಾರಾದರೂ ಕೃತ್ಯ ಎಸಗಿದ್ದಾರಾ?
ನಾವು ಸತ್ಯವನ್ನು ನಂಬುತ್ತೇವೆ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಅನ್ನುವ ದೃಢ ವಿಶ್ವಾಸ ನನಗಿದೆ. ಕಳೆದ ೩೫ ವರ್ಷದಿಂದ ಪಕ್ಷಕ್ಕಾಗಿ ಪ್ರಾ ಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕೆಲಸದ ಬಗ್ಗೆ ಪುತ್ತೂರಿನ ಜನ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಣದ ಕೈಗಳು ನನ್ನ ವಿರುದ್ಧ ಕೆಲಸ ಮಾಡಿವೆ. ಅವರು ಪಕ್ಷದೊಳಗಿನವರೂ ಕೂಡ ಇರಬಹುದು. ಆದರೆ ಈ ಬಗ್ಗೆ ನನಗೆ ಸಮರ್ಪಕ ಮಾಹಿತಿ ಇಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ. ಆನಂತರವಷ್ಟೇ ಸತ್ಯ ತಿಳಿದು ಬರಲಿದೆ.
*ವಿವಾದಕ್ಕೆ ಕಾರಣವಾದ ಮಹಿಳೆಯ ನಿಮಗೆ ಮೊದಲೇ ಪರಿಚಯವಿತ್ತಾ?
ಖಂಡಿತ ಇಲ್ಲ. ಆಕೆ ಯಾರೆಂಬುದೇ ನನಗೆ ಗೊತ್ತಿಲ್ಲ.
*ನಿಮಗೆ ಈ ಸಲ ಪುತ್ತೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಕೈ ತಪ್ಪುತ್ತದೆ ಅನ್ನುವ ಮಾತುಗಳು ಕೇಳಿ ಬಂದಿವೆ? ಈ ಪ್ರಕರಣದಿಂದ ನಿಮಗೆ ಟಿಕೆಟ್ ಕೈ ತಪ್ಪಬಹುದಾ?
ಇಷ್ಟು ವರ್ಷ ಪುತ್ತೂರಿನಲ್ಲಿ ನಾನು ಪಕ್ಷ ಸಂಘಟಿಸಿದ್ದೇನೆ. ಜನರ ಒಲವು ನನ್ನ ಕಡೆ ಇದೆ. ಜನರಿಗಾಗಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಸಿದ್ಧವಾಗಿದ್ದೇನೆ, ಬಿಜೆಪಿಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಎಂದೂ ದೊಡ್ಡವನಲ್ಲ. ನಮ್ಮ ಪಕ್ಷ ಇರುವುದೇ ಹೀಗೆ.
*ನಿಮ್ಮ ಮೇಲಿನ ದೂರು ಅಮಿತ್ ಶಾ ವರೆಗೆ ತಲುಪಿದೆಯಂತೆ ಇದು ನಿಜಾನಾ?
ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಯಾವ ಕರೆಯೂ ಬಂದಿಲ್ಲ. ರಾಜ್ಯ ನಾಯಕರೂ ಕರೆ ಮಾಡಿಲ್ಲ.