ನ್ಯೂಸ್ ನಾಟೌಟ್: ಮಗುವಿಗೆ ಜನ್ಮ ನೀಡಿ ತಾಯಿಯೇ ಮಗುವನ್ನು ಬಚ್ಚಿಟ್ಟ ಘಟನೆಯೊಂದು ವರದಿಯಾಗಿದೆ.ಅನಾರೋಗ್ಯ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಕೇರಳ ಪೊಲೀಸರು ಮಂಗಳವಾರ ರಕ್ಷಣೆ ಮಾಡಿದ್ದಾರೆ. ತಾಯಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಅರನ್ಮುಳ ಮೂಲದ ಮಹಿಳೆ ಕೊಟ್ಟಾದಲ್ಲಿನ ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಅತಿಯಾದ ರಕ್ತಸ್ರಾವದಿಂದ ಸ್ಥಳೀಯ ಆಸ್ಪತ್ರೆಗೆ ಸೇರಿದಳು. ಮಗುವಿನ ಬಗ್ಗೆ ಪ್ರಶ್ನಿಸಿದಾಗ ಆಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಹೆರಿಗೆಯ ಸಮಯದಲ್ಲಿ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾಳೆ. ಆದರೆ ಆಕೆಯ ಹಿರಿಯ ಮಗ ಮಗುವಿನ ಅಸಲಿ ಸ್ಥಿತಿಯನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಇದಾದ ಬಳಿಕ ಚೆಂಗನ್ನೂರು ಪೊಲೀಸರು ಮಹಿಳೆಯ ಮನೆಯನ್ನು ಪರಿಶೀಲಿಸಿದಾಗ ಮನೆಯ ಹೊರಗಿನ ಸ್ನಾನಗೃಹದ ಒಳಗೆ ಬಕೆಟ್ನಲ್ಲಿ ಗಂಡು ಮಗುವನ್ನು ಬಟ್ಟೆಯಿಂದ ಮುಚ್ಚಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ತಮ್ಮ ವಶಕ್ಕೆ ಪಡೆದು ಪೊಲೀಸರು ನವಜಾತ ಶಿಶುವಿದ್ದ ಬಕೆಟ್ ಹಿಡಿದು ಹತ್ತಿರದ ಆಸ್ಪತ್ರೆಗೆ ಓಡಿದ್ದಾರೆ.
ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.ಸದ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು ಐಪಿಸಿ 317 ಸೆಕ್ಷನ್ ಅಡಿಯಲ್ಲಿ ಮಗುವಿನ ತಾಯಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪೊಲೀಸರು ಮಹಿಳೆ ಮತ್ತು ಆಕೆಯ ಬೇರ್ಪಟ್ಟ ಪತಿಯ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.