ನ್ಯೂಸ್ ನಾಟೌಟ್: ಮಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಜೊತೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ಬಳಿಕ ನಗರದ ಹಲವೆಡೆ ವಿಶಿಷ್ಟ ಬಗೆಯ ಪ್ರಯೋಗಗಳನ್ನು ನಡೆಸಲಾಗಿದೆ. ಇದೆಲ್ಲದರ ಮಾಹಿತಿ ಇಲ್ಲಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಕುಲ್ದೀಪ್ ಕುಮಾರ್ ಜೈನ್ ಆಗಮನದ ಬಳಿಕ ಟ್ರಾಫಿಕ್ ಸಿಗ್ನಲ್ , ನಗರ ಸಂಚಾರದಲ್ಲಿ ಭಾರೀ ಬದಲಾವಣೆ ಕಂಡಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಿಂದ ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣವೂ ಹೊಸ ರೂಪ ಪಡೆದಿದೆ.ಸರ್ವೀಸ್ ಮಾತ್ರವಲ್ಲದೇ ಕೆಎಸ್ಆರ್ಟಿಸಿ ಹಾಗೂ ಸಿಟಿ ಬಸ್ (ನಗರ ಸಾರಿಗೆ) ಗಳಿಗೂ ಅಲ್ಲೇ ತಂಗುದಾಣದ ಅವಕಾಶ ಮಾಡಿಕೊಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಎಂಡ್ ಪಾಯಿಂಟ್ ಎಂದೇ ಕರೆಸಿಕೊಳ್ಳುವ ನಗರದ ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಎಸ್ ಆರ್ಟಿಸಿಯ 25 ಬಸ್ಗಳಿಗೆ ನಿಲ್ಲಲು ಸ್ಥಳಾವಕಾಶ ನೀಡಲಾಗಿದೆ.
ಈ ಹಿಂದೆ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಉತ್ತರ ಕರ್ನಾಟಕ ಭಾಗದ ಕಡೆ ತೆರಳುವ ಖಾಸಗಿ ಬಸ್ ಗಳು ನಿಲ್ಲುತ್ತಿದ್ದವು. ಜತೆಗೆ ಜಿಲ್ಲೆಯ ಹಲವೆಡೆ ಸಂಚರಿಸುವ ಖಾಸಗಿ ಲೋಕಲ್ ಬಸ್ ಗಳಷ್ಟೇ ನಿಲ್ಲುತ್ತಿದ್ದವು. ಇದೀಗ ಬದಲಾವಣೆಯಲ್ಲಿ ಸಿಟಿ ಬಸ್ ಅನ್ನು ಸರ್ವಿಸ್ ಬಸ್ ನಿಲ್ದಾಣದಲ್ಲಿ ವಿಲೀನಗೊಳಿಸಲಾಗಿದೆ. ಹಾಗಾಗಿ ನಗರದ ಒಳಗಡೆ ಅಂದ್ರೆ ಸುರತ್ಕಲ್, ಕಾಟಿಪಳ್ಳ, ಬಜ್ಪೆ, ಉಳ್ಳಾಲ, ಅಡ್ಯಾರ್ ಮುಂತಾದೆಡೆ ಸಂಚರಿಸುವ ಬಸ್ ಗಳು ಕೂಡಾ ಸರ್ವೀಸ್ ಬಸ್ ನಿಲ್ದಾಣದಲ್ಲೇ ತಂಗಲಿವೆ. ಹಾಗಾಗಿ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಬೇಕಿದೆ.