ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.ನೀತಿಸಂಹಿತೆಯೂ ಜಾರಿಯಲ್ಲಿದೆ.ಒಂದೆಡೆ ಟಿಕೆಟ್ ಗಾಗಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು,ಮತ್ತೊಂದೆಡೆ ಅಸಮಾಧಾನದ ಹೊಗೆ ಭುಗಿಲೆದ್ದಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಇದರ ಮಧ್ಯೆ ಪಕ್ಷಾಂತರ ಪರ್ವವೂ ಜೋರಾಗಿದೆ. ಈಗಾಗಲೇ ಬಿಜೆಪಿಯ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರೆ, ಇತ್ತ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿರುವುದರ ಸುದ್ದಿ ಭಾರೀ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.
ಈ ಕುರಿತು ಶಿವಮೊಗ್ಗ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.ಪಕ್ಷದ ಏಳಿಗೆಗಾಗಿ ನಾನು ಶ್ರಮಿಸಿದ್ದೇನೆ.ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆ ಇತ್ತು. ಈ ಬಗ್ಗೆ ನಾನು ಹೇಳಿಕೊಂಡಿದ್ದೆ. ಪಕ್ಷದ ವೇದಿಕೆಗಳಲ್ಲೂ ಈ ಕುರಿತು ಮಾತಾಡಿದ್ದೆ. ವಿನಂತಿಯನ್ನೂ ಮಾಡಿದ್ದೆ. ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದು ತಿಳಿಸಿದ್ದಾರೆ.
ಈಶ್ವರಪ್ಪ ಅವರು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ. ‘ನನಗೆ ಅವನು ಏನು ಲೆಕ್ಕ’ ಎಂದು ಈಶ್ವರಪ್ಪರವರು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.ಈಶ್ವರಪ್ಪ ಅವರ ಬಳಿ ದುಡ್ಡಿರಬಹುದು ಆದರೆ ಈ ಸಲ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆಂದು ಸವಾಲು ಹಾಕಿದರು.32 ವರ್ಷಗಳ ಅಧಿಕಾರಾವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಮಾಡಿದ್ದು ಏನೂ ಇಲ್ಲ. ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.