ನ್ಯೂಸ್ ನಾಟೌಟ್: ಕಾಂತಾರ ತನ್ನ ಕಥೆ ಮತ್ತು ನಟನೆಯಿಂದಲೇ ಪ್ಯಾನ್ ಇಂಡಿಯಾ ರಿಲೀಸ್ ಆಗುವ ಮೂಲಕ ಅಭಿಮಾನಿಗಳ ಮನಗೆದ್ದ ಚಲನಚಿತ್ರ. ಹಾಗೆಯೇ ಅದರ ಕಾರಣದಿಂದ ಹಲವರು ದೈವದ ವೇಷ – ನೃತ್ಯಗಳನ್ನು ಅನುಕರಣೆ ಮಾಡಿ ತುಳುನಾಡಿನ ಜನತೆಯ ಭಾವನೆಗೆ ದಕ್ಕೆಯಾಗಿ ವಿರೋಧ ವ್ಯಕ್ತವಾಗಿತ್ತು.
ನಿನ್ನೆ ನಡೆದ ಆರ್ಸಿಬಿ ಪಂದ್ಯದಲ್ಲೂ ಕಾಂತಾರದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಕ್ರಿಕೆಟ್ ನೋಡುತ್ತಾ ಎಂಜಾಯ್ ಮಾಡುತ್ತಿರುವ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ (ಎಪ್ರಿಲ್ 2) ನಡೆದ ಪಂದ್ಯದಲ್ಲಿ ಆರ್ಸಿಬಿ ಫ್ಯಾನ್ ಪಂಜುರ್ಲಿ ದೈವದ ವೇಷ-ಭೂಷಣ ಧರಿಸಿಕೊಂಡು ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ ಈ ಫೋಟೋವನ್ನು ಆರ್ಸಿಬಿ ಟ್ವಿಟ್ಟರ್ ಖಾತೆಯೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತುಳುನಾಡಿನ ಅನೇಕರು ಆರ್ಸಿಬಿ ಪಂದ್ಯದ ವೇಳೆ ಪಂಜುರ್ಲಿ ದೈವದ ವೇಷ ಧರಿಸಿರುವ ವ್ಯಕ್ತಿಯನ್ನು ಕಂಡು ಕಾಂತಾರವೆಂದು ಹೊಗಳಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ದೈವರಾಧನೆಗೆ ಅದರದ್ದೇ ಆದಂತಹ ವಿಶೇಷತೆ, ಪ್ರಾಮುಖ್ಯತೆ ಇದೆ. ಕರಾವಳಿಗರ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿರುವ ಇಂತಹ ವರ್ತನೆಯಿಂದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.