ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ನೀತಿ ಸಂಹಿತೆ ಕೂಡಾ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವಿಧಾನಸಭಾ ಕ್ಷೇತ್ರಗಳ ಗಡಿಗಳಲ್ಲಿ ತಪಾಸಣೆ ಬಿಗುಗೊಳಿಸಿದೆ.
ಅಂತಾರಾಜ್ಯ ಹಾಗು ಜಿಲ್ಲಾ ಗಡಿಗಳಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಗಡಿ ಮೂಲಕ ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಅಲ್ಲಲ್ಲಿ ಚೆಕ್ ಪೋಸ್ಟ್ ಗಳಿದ್ದು ಅಕ್ರಮ ಸಾಗಟಗಳನ್ನು ತಪಾಸಣೆ ಬಿಗಿ ಗೊಳಿಸಲಾಗಿದೆ.
ಎಲ್ಲಾ ವಾಹನಗಳನ್ನೂ ತಪಾಸಣೆ ನಡೆಸಿ ವಾಹನ ಸಂಖ್ಯೆ, ಪ್ರಯಾಣಿಕರ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಸುಳ್ಯ ವಿಧಾನ ಕ್ಷೇತ್ರದ ಗಡಿಯಲ್ಲಿ ಆರು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಆಲೆಟ್ಟಿ, ಮಂಡೆಕೋಲು ಹಾಗು ಜಾಲ್ಸೂರು ಅಂತರಾಜ್ಯ ಗಡಿಯಲ್ಲಿ ಮೂರು ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಕೇರಳ ಕರ್ನಾಟಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ಪರಿಶೀಲನೆ ನಡೆಸಲಾಗುತಿದೆ.
ದಕ್ಷಿಣ ಕನ್ನಡ- ಕೊಡಗು ಗಡಿ ಸಂಪಾಜೆಯಲ್ಲಿ ಒಂದು ಚೆಕ್ ಪೋಸ್ಟ್ ಹಾಗು ಹಾಸನ ಮತ್ತು ದಕ್ಷಿಣ ಕನ್ನಡದ ಜಿಲ್ಲಾ ಗಡಿ ಗುಂಡ್ಯದಲ್ಲಿ ಎರಡು ಚೆಕ್ ಪೋಸ್ಟ್ ತೆರೆಯಲಾಗಿದೆ. ಅಕ್ರಮ ಹಣ ಹಾಗು ವಸ್ತುಗಳ ಸಾಗಾಟಗಳು ಆಗದಂತೆ ತಡೆಯಲು ಪೊಲೀಸ್ ಮತ್ತು ಇತರ ಅಧಕಾರಿಗಳ ತಂಡ ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದಾರೆ.