ನ್ಯೂಸ್ ನಾಟೌಟ್: ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟೀಸ್ ನೀಡಿರುವ ಬಗ್ಗೆ ವರದಿಯಾಗಿದೆ.
ಪರೀಕ್ಷೆಯ ಹಿನ್ನೆಲೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪಕ್ಷದ ಚಿಹ್ನೆ ಬಳಸಿ ಶುಭಾಶಯ ಕೋರಿದ ಕಾರಣಕ್ಕಾಗಿ ನೋಟೀಸ್ ನೀಡಿ 24 ಗಂಟೆಯೊಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ.
ಯಾವುದೇ ಪೂರ್ವಾನುಮತಿ ಪಡೆಯದೆ ರಾಜಕೀಯ ಪ್ರೇರಿತ ಚಿತ್ರವನ್ನು ಹಂಚಿಕೊಂಡಿರುವುದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಇನ್ನೋರ್ವ ಶ್ರೀಮಂಗಲದ ನಾಲ್ಕೆರಿ ಗ್ರಾಮದ ಸಚಿನ್ ಚೆರಿಯಮನೆ ಎಂಬುವವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ ಹಿನ್ನೆಲೆ ನೋಟೀಸ್ ನೀಡಲಾಗಿದೆ. ರಾಜಕೀಯ ಪ್ರೇರಿತ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ನೊಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.