ನ್ಯೂಸ್ ನಾಟೌಟ್ : ಮದುವೆ ಅಂದ್ರೆ ಸಾಕು ಜನಸಾಮಾನ್ಯರಿಗೆ ಖರ್ಚು-ವೆಚ್ಚದ ಬಗ್ಗೆ ಯೋಚನೆ ಬಂದು ಬಿಡುತ್ತೆ. ಕನಿಷ್ಟ ಎರಡು-ಮೂರು ಲಕ್ಷದಷ್ಟು ಹಣವನ್ನು ಎಲ್ಲಿಂದ ಸಂಗ್ರಹಿಸಲಿ ಎಂಬ ಚಿಂತೆ ಮನೆ ಮಾಡುತ್ತೆ..ಆದರೆ ಇಲ್ಲೊಂದು ಕಡೆ ಮದುವೆಗಾಗಿ ಬರೋಬ್ಬರಿ ೫೫ ಕೋಟಿ ರೂ. ಖರ್ಚು ಮಾಡಲಾಗಿದೆ ಅಂದರೆ ನೀವು ನಂಬಲೇಬೇಕು.
ಭಾರತೀಯ ಬಿಲಿಯನೇರ್ ಉದ್ಯಮಿ, ಬಿ.ರವಿ ಪಿಳ್ಳೈ ಅವರು 2015ರಲ್ಲಿ ತಮ್ಮ ಪುತ್ರಿ ಆರತಿ ಪಿಳ್ಳೈಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿದ್ದರು. ಈ ಮದುವೆ ಅದೆಷ್ಟು ಅದ್ಧೂರಿಯಾಗಿ ನಡೆದಿತ್ತು ಎಂದರೆ ಮದ್ವೆ ನಡೆದು ಎಂಟು ವರ್ಷ ಕಳೆದ ನಂತರವೂ ಜನರು ಆ ಮದುವೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಕೋಟ್ಯಾಧಿಪತಿ ಉದ್ಯಮಿ ರವಿ ಪಿಳ್ಳೈ ಅವರು ಮಗಳ ಮದುವೆಗೆ ಬರೋಬ್ಬರಿ 55 ಕೋಟಿ ರೂ. ಖರ್ಚು ಮಾಡಿದ್ದರು ಎಂಬ ಸುದ್ದಿ ಕೇಳಿ ಎಲ್ಲರಿಗೂ ಶಾಕ್ !
ರವಿ ಪಿಳ್ಳೈ ಅವರ ಮಗಳು, ಆರತಿ ಪಿಳ್ಳೈ ಅವರು ವೃತ್ತಿಯಲ್ಲಿ ವೈದ್ಯರಾದ ಆದಿತ್ಯ ವಿಶು ಅವರನ್ನು ನವೆಂಬರ್ 26, 2015ರಂದು ಕೇರಳದ ಕೊಲ್ಲಂನಲ್ಲಿ ವಿವಾಹವಾದರು. ಮದುವೆಯು ರವಿ ಪಿಳ್ಳೈ ಅವರ ಶ್ರೀಮಂತಿಕೆಯ ಪ್ರದರ್ಶನವಾಗಿತ್ತು. ಮದುವೆ ಸಮಾರಂಭದಲ್ಲಿ 42 ದೇಶಗಳಿಂದ 30,000 ಅತಿಥಿಗಳು ಭಾಗವಹಿಸಿದ್ದರು. ಇದರಲ್ಲಿ ಕತಾರ್ನ ರಾಜ ಕುಟುಂಬಗಳೂ ಸೇರಿದ್ದವು ಎನ್ನುವುದು ವಿಶೇಷ.
ಇನ್ನು ಮಲಯಾಳಂ ಚಿತ್ರರಂಗದ ತಾರೆಯರ ದಂಡೇ ಈ ಮದುವೆಗೆ ಹರಿದು ಬಂದಿತ್ತು.ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಖ್ಯಾತ ಚಲನಚಿತ್ರ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಸ್ಯಾಮ್ಸಂಗ್ ಮತ್ತು ಜಪಾನ್ ಗ್ಯಾಸ್ ಕಾರ್ಪೊರೇಷನ್ನ ಪ್ರಸಿದ್ಧ ಸಿಇಒಗಳು ಸಹ ತಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮದ ಹೈಲೈಟ್ ಆಗಿದ್ದರು.ಈ ಅದ್ದೂರಿ ಮದುವೆಯನ್ನು ನೋಡಿದ್ರೆ ಎರಡು ಕಣ್ಣುಗಳೇ ಸಾಲದು ಎಂಬಂತೆ ಅಲ್ಲಿನ ಮಂಟಪವನ್ನು ಸಿಂಗರಿಸಲಾಗಿತ್ತು. ವಿಶಿಷ್ಟವಾದ ಕಮಲದ ಥೀಮ್ನ ಮಂಟಪ ಇದಾಗಿದ್ದು,ಕೋಟಿ ಕೋಟಿ ಬೆಲೆಬಾಳುವ ಮಂಟಪ ಇದಾಗಿತ್ತು. ಇದನ್ನು ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್ ಅವರು ಮದುವೆಯ ಪೆಂಡಾಲ್ನ್ನು ಯೋಜಿಸಿದ್ದರು.
200 ವೃತ್ತಿಪರರ ತಂಡವು 20 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 20 ಎಕರೆಯಲ್ಲಿ ಹರಡಿರುವ 3,50,000 ಚದರ ಅಡಿ ವಿಸ್ತೀರ್ಣದ ವಿಶಿಷ್ಟವಾದ ಪೆಂಡಾಲ್ನ್ನು ರಚಿಸಿದ್ದರು. ಕೊಲ್ಲಂನಲ್ಲಿ ರಾಜಸ್ಥಾನಿ ವಾತಾವರಣವನ್ನು ಸೃಷ್ಟಿಸಲು ಡಿಸೈನರ್ ಸುಮಾರು 75 ದಿನಗಳನ್ನು ತೆಗೆದುಕೊಂಡಿದ್ದರಂತೆ. ಇತ್ತ ಅತಿಥಿಗಳ ಮನರಂಜನೆಗಾಗಿ, ಶ್ರೀ ಪಿಳ್ಳೈ ಅವರು ಖ್ಯಾತ ನಟಿಯರಾದ ಮಂಜು ವಾರಿಯರ್ ಮತ್ತು ಶೋಭನಾ ಅವರಿಂದ ಭರತನಾಟ್ಯ ಪ್ರದರ್ಶನವನ್ನು ಏರ್ಪಡಿಸಿದ್ದು, ಸೂರ್ಯ ಅವರ ನೃತ್ಯ ನಿರ್ದೇಶನದ ‘ರಿದಮ್ ಆಫ್ ದಿ ಫಾರೆಸ್ಟ್’ ಪ್ರದರ್ಶನವು ವೇದಿಕೆಯಲ್ಲಿ 400 ನೃತ್ಯಗಾರರನ್ನು ಹೊಂದಿತ್ತು ಎಂದರೆ ಎಲ್ಲರೂ ಅಚ್ಚರಿಪಡಬೇಕಾದ ವಿಚಾರ.
೫೫ ಕೋಟಿ ರೂ. ವೆಚ್ಚ ಅಂದರೆ ಅಲ್ಲಿ ಊಟದ ವ್ಯವಸ್ಥೆ ಕೂಡ ಭರ್ಜರಿಯಾಗಿಯೇ ಇರಬೇಕಲ್ವ? ಇಲ್ಲಿ ಏಕಕಾಲಕ್ಕೆ 7,000 ಅತಿಥಿಗಳಿಗೆ ಅವಕಾಶ ಕಲ್ಪಿಸುವ ಡೈನಿಂಗ್ ಹಾಲ್ಗಳಲ್ಲಿ ಕೇರಳದ ಸಾಂಪ್ರದಾಯಿಕ ಸದ್ಯವನ್ನು ಅತಿಥಿಗಳಿಗಾಗಿ ನೀಡಿದ್ದು ವಿಶೇಷವಾಗಿತ್ತು.ಅದ್ದೂರಿ ವಿವಾಹ ಸಮಾರಂಭದಲ್ಲಿ ಈ ಔತಣಕೂಟವನ್ನು ಏರ್ಪಡಿಸಿದ್ದು ಬಹಳ ಅಚ್ಚುಕಟ್ಟಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅತಿಥಿಗಳಿಗೆ ಭೂರಿ ಭೋಜನದ ವ್ಯವಸ್ಥೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಬಡತನದಿಂದ ಹೋರಾಡುತ್ತಿರುವ ರೈತನ ಮಗನಾಗಿ ಜನಿಸಿದ ಪಿಳ್ಳೈ ಅವರು, ಆರ್ಪಿ ಗ್ರೂಪ್ನ ಬಹು-ಮಿಲಿಯನ್ ಡಾಲರ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಾರಣ ಅವರ ಸಂಕಲ್ಪದಿಂದ ಯಶಸ್ವಿಯಾಗಿದ್ದಾರೆ. ಅವರ ಬಳಿ ಐಷಾರಾಮಿ ಹೋಟೆಲ್ಗಳು, ಉಕ್ಕು, ಅನಿಲ, ತೈಲ, ಸಿಮೆಂಟ್ ಕಂಪನಿಗಳು ಮತ್ತು ಶಾಪಿಂಗ್ ಮಾಲ್ಗಳಿದ್ದು ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.