ನ್ಯೂಸ್ ನಾಟೌಟ್:ನೇತ್ರಾವತಿ ನದಿ ನೀರಿನ ಹರಿವು ಕ್ಷೀಣಿಸಿರುವ ಹಿನ್ನೆಲೆ ನೀರು ಮಲೀನವಾಗುವುದನ್ನು ತಡೆಗಟ್ಟಲು ಹಾಗೂ ಶುಚಿತ್ವ ಕಾಪಾಡುವ ಸಲುವಾಗಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ದಲ್ಲಿ ಸಾಬೂನು, ಶಾಂಪೂ ಗಳ ಮಾರಾಟ, ಬಳಕೆಯನ್ನು ನಿಷೇಧಿಸ ಲಾಗಿದೆ.ಈ ಬಗ್ಗೆ ಧರ್ಮಸ್ಥಳ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ನದಿ ಸುತ್ತಲಿನ ಅಂಗಡಿಗಳಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಧರ್ಮಸ್ಥಳದಲ್ಲಿ ಆಗಾಗ ಕ್ಷೇತ್ರದ ವತಿಯಿಂದಲೇ ಸ್ನಾನಘಟ್ಟದಲ್ಲಿ ಸ್ವತ್ಛತೆ ಕಾಪಾಡುವಂತೆ ನಿತ್ಯ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಯಾತ್ರಿಕರು ನದಿಗೆ ಬಟ್ಟೆ ಎಸೆಯುವುದು, ಸೋಪು, ಶಾಂಪೂ ಬಳಸಿ ಅದರ ಪ್ಲಾಸ್ಟಿಕ್ ನದಿಗೆ ಎಸೆಯುವುದು ಕಂಡುಬರುತ್ತಿದ್ದು, ಇದು ಸ್ನಾನಘಟ್ಟದಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದಲೂ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.