ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದರಿಂದ ತೃಪ್ತರಾಗದ ಕೈ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ವಿರುದ್ಧವೇ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಘೋಷಿಸಿರುವ ಅಭ್ಯರ್ಥಿ ಜಿ. ಕೃಷ್ಣಪ್ಪ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಸುಳ್ಯ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿಗೆ ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ನಡೆಸಿದ್ದಾರೆ. ‘ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’ ಎಂದು ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ.
ಸುಳ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಲು 15 ಬಸ್ ಗಳಲ್ಲಿ ಮಂಗಳೂರಿಗೆ ಬಂದ ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ, ಟಿಕೆಟ್ ಅಕಾಂಕ್ಷಿ ನಂದಕುಮಾರ್ ಪರವಾಗಿ ಕಾರ್ಯಕರ್ತರು ಧ್ವನಿಗೂಡಿಸಿದ್ದಾರೆ.
‘ನಂದಕುಮಾರ್ ಅವರಿಗೆ ಬಿ ಫಾರ್ಮ್ ಕೊಡಿ, ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡುತ್ತೇವೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಫಲಕಗಳನ್ನು ಹಿಡಿದು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ ಎಮದು ವರದಿ ತಿಳಿಸಿದೆ.