ನ್ಯೂಸ್ ನಾಟೌಟ್: ದೈವಗಳ ನೇಮೋತ್ಸವ ಘಟ್ಟದ ಕೆಳಗೆ ಮಾತ್ರ ನಡೆಯುತ್ತೆ ಅನ್ನೋದು ತುಳುನಾಡಿನ ಕರಾವಳಿಗರ ನಂಬಿಕೆ. ಇದು ಕುಟುಂಬ ಪರಂಪರೆಯಿಂದ ಬಂದ ನಂಬಿಕೆ, ಆರಾಧನೆ.
ಆದರೆ ಕಾಂತಾರ ಸಿನಿಮಾದ ಮೂಲಕ ದೈವಾರಾಧನೆಯು ಇಡೀ ಜಗತ್ತಿಗೆ ಸಿನಿಮಾ ಮೂಲಕ ತೋರಿಸಿ ಅನೇಕ ಕಡೆಗಳಲ್ಲಿ ಆ ಆರಾಧನಾ ಪದ್ಧತಿಯನ್ನು ಅವಮಾನ ಮಾಡಿದ ಮತ್ತು ಅನುಕರಣೆ ಮಾಡಿ ಹಣ ಸಂಪಾದನೆ ಮಾಡಿದ ಆರೊಪಗಳು, ದೃಶ್ಯಾವಳಿಗಳು ಕಂಡುಬಂದಿವೆ.
ಇದರಿಂದ ಅನೇಕ ತುಳುನಾಡಿನ ಜನರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಬರಲಿರುವ ಕಾಂತಾರದ ಮುಂದುವರಿದ ಭಾಗವಾದ ಕಾಂತಾರ 2 ಸಿನಿಮಾವನ್ನು ಬ್ಯಾನ್ ಮಾಡುವಂತೆ ಕರಾವಳಿಯ ಜನತೆ ರಿಷಭ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ಗೆ ಆಗ್ರಹಿಸಿದ್ದಾರೆ.
ಕಾಂತಾರ ಸಿನಿಮಾದ ನಂತರ ಪಂಜುರ್ಲಿ ವೇಷಧರಿಸಿ ದೈವಕ್ಕೆ ಅಪಮಾನ ಮಾಡುವ ಪ್ರಸಂಗಗಳು ಕೇಳಿ ಬರುತ್ತಲೇ ಇವೆ. ರೀಲ್ಸ್ಗಳಲ್ಲಿ, ಸಾಂತಾಕ್ಲಾಸ್ ವೇಷದ ರೂಪದಲ್ಲಿ, ಶಾಲೆಯ ವಾರ್ಷಿಕೋತ್ಸವಗಳಲ್ಲಿ ಪಂಜುರ್ಲಿ ವೇಷಧರಿಸಿ ದೈವಕ್ಕೆ ಅಪಮಾನ ಎಸಗುವ ಕೆಲಸ ನಡೆಯುತ್ತಿದೆ ಎಂದು ತುಳುವರು ಆರೋಪಿಸಿದ್ದು, ದೈವಾರಾಧನೆ ಕೇವಲ ಕರಾವಳಿ ಭಾಗಕ್ಕೆ ಮಾತ್ರ ಸೀಮಿತ. ಈ ರೀತಿ ಕಂಡ ಕಂಡಲ್ಲಿ ದೈವದ ಆರಾಧನೆಗಳು ನಡೆದುಬಿಟ್ಟರೆ ನಂಬಿಕೆಗೆ ಮತ್ತು ಅದರ ಹಿಂದಿನ ವೈಜ್ಞಾನಿಕ ಮತ್ತು ಜಾನಪದ ಮೌಲ್ಯಗಳಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ತುಳುನಾಡಿನ ಸಂಸ್ಕೃತಿಗೆ ಯಾವುದೇ ಭಂಗ ಆಗದೇ ಉಳಿಯಬೇಕು ಅಂದರೆ ಕಾಂತಾರ 2 ಸಿನಿಮಾ ಬ್ಯಾನ್ ಆಗಬೇಕು ಅಂತಾ ತುಳುನಾಡಿನ ಜನತೆ ಆಗ್ರಹಿಸಿದ್ದಾರೆ.