ನ್ಯೂಸ್ ನಾಟೌಟ್ : ಪಾನ್ ಮತ್ತು ಆಧಾರ್ ಲಿಂಕ್ ಮಾಡದೆ ಇದ್ದವರಿಗೆ ಮತ್ತು ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ.
2023ರ ಜುಲೈ 1ರಿಂದ, ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದನ್ನು 30 ದಿನಗಳ ಒಳಗೆ 1000 ರೂ ಶುಲ್ಕ ಕಟ್ಟಿ ಲಿಂಕ್ ಮಾಡಿಸಿ ಮತ್ತೆ ಕಾರ್ಯಗತಗೊಳಿಸಬಹುದು ಎಂದು ಇಲಾಖೆ ಸೂಚಿಸಿದೆ.
ಕೊನೆಯ ದಿನ ಸಮೀಪಿಸುತ್ತಿದ್ದಂತೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.
ಈಗ ದಿನಾಂಕವನ್ನು ಜೂನ್ 30ರ ವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದೆ.