ನ್ಯೂಸ್ ನಾಟೌಟ್: ಹೊರಗಿನ ಪ್ರಪಂಚ ವಿಶಾಲವಾಗಿದೆ. ನಿಮ್ಮ ಅಧ್ಯಯನದ ಜತೆಗೆ ದೇಶದ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಒಂದು ನಿಮಿಷವನ್ನಾದರೂ ಮೀಸಲಿಡಿ ಎಂದು ತಮಿಳುನಾಡಿನ ಬಿಜೆಪಿ ನಾಯಕ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ತರವಾದುದ್ದಾಗಿದೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳೆಂದರೆ ಅವರಿಗೆ ಯಾವುದಕ್ಕೂ ಸಮಯ ಇರುವುದಿಲ್ಲ. ವಿಪರೀತ ಒತ್ತಡ ಸಮಯದಲ್ಲಿ ಇರುತ್ತೀರಿ, ಒಟಿ, ಐಸಿಯು, ವಾರ್ಡ್, ಕ್ಲಾಸ್ ರೂಂ ನಲ್ಲೇ ಬ್ಯುಸಿಯಾಗಿರುವ ನಿಮ್ಮ ಜೀವನದಲ್ಲಿ ಹೊರ ಪ್ರಪಂಚ ಹೇಗಿದೆ ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸ್ವಲ್ಪವೂ ಸಮಯ ಇರುವುದಿಲ್ಲ.
ಆದರೆ ನಾನು ನಿಮಗೆ ಸಲಹೆ ಕೊಡುವುದಕ್ಕೆ ಬಯಸುತ್ತೇನೆ. ದಯವಿಟ್ಟು ಸ್ವಲ್ಪ ಸಮಯವನ್ನಾದರೂ ನೀವು ಮಾಧ್ಯಮ, ಪತ್ರಿಕೆಗಳನ್ನು ಓದುವುದಕ್ಕೆ ಸಮಯವನ್ನು ಮೀಸಲಿಡಬೇಕು. ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಅನ್ನುವ ಸೂಕ್ಷ್ಮ ವಿಚಾರದ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಭವಿಷ್ಯದ ಭಾರತ ಹೇಗಿರಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗಬೇಕು ಎಂದು ಅಣ್ಣಾಮಲೈ ಕಿವಿಮಾತು ಹೇಳಿದರು.
ಇದೇ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಕೆ.ವಿ.ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆಯ ಪ್ರಾಂಶುಪಾಲ ಡಾ| ಲೀಲಾಧರ್ ಡಿ.ವಿ., ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.