ನ್ಯೂಸ್ ನಾಟೌಟ್ : ಜಾರ್ಖಂಡ್ ನ ಚತ್ರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಗುರುವಾರ 11 ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಾ ದೇವಿ ಎಂದು ಗುರುತಿಸಲಾದ ಆ ಮಗುವಿನ ತಾಯಿಯು ಹುಟ್ಟಿದ ಕೂಡಲೇ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ. ಮಗುವಿನ ತಾಯಿ ಸೇರಿದಂತೆ 11 ಜನರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಪೊಲೀಸರು ಮಾಹಿತಿ ಪಡೆದ ತಕ್ಷಣ ಕ್ರಮ ಕೈಗೊಂಡು 24 ಗಂಟೆಗಳ ಒಳಗೆ ಬೊಕಾರೊ ಜಿಲ್ಲೆಯಿಂದ ನವಜಾತ ಶಿಶುವನ್ನು ರಕ್ಷಿಸಿದರು.” ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅವಿನಾಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಮಗುವಿನ ತಾಯಿ ಆಶಾದೇವಿಯಿಂದ 1 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಗುವಿನ ತಾಯಿಗೆ 1 ಲಕ್ಷ ರೂ., ಉಳಿದ 3.5 ಲಕ್ಷ ರೂ.ಗಳನ್ನು ದಲ್ಲಾಳಿಗಳಿಗೆ ಹಂಚಿಕೆ ಮಾಡಲಾಗಿದೆ. ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ವೈದ್ಯ ಮನೀಶ್ ಲಾಲ್ ಹೇಳಿಕೆ ಮೇರೆಗೆ ಛತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.