ನ್ಯೂಸ್ ನಾಟೌಟ್: ಮದುವೆ ಹಲವರ ಜೀವನದಲ್ಲಿ ಒಂದು ಕನಸು – ಇನ್ನು ಕೆಲವರದ್ದು ದುರಂತ, ಇಲ್ಲದಕ್ಕೂ ವಿಭಿನ್ನ ಎನ್ನುವಂತೆ ಇಲ್ಲೊಬ್ಬ ವ್ಯಕ್ತಿ ತಂದೆಯ ಅಂತ್ಯಕ್ರಿಯೆಯ ದಿನವೇ ಮದ್ವೆ ಮಾಡಿಕೊಂಡಿರುವುದು ಚೆನ್ನೈನ ಕಲ್ಲಕುರಿಚಿಯಲ್ಲಿ ವರದಿಯಾಗಿದೆ.
ತಂದೆಯ ಅಂತ್ಯಕ್ರಿಯೆಯ ದಿನವೇ ಮಗನ ಮದುವೆ ಎಂದರೆ ನಂಬೋಕೆ ಕಷ್ಟವಾದರೂ ಇದು ನಿಜ. ಚೆನ್ನೈನ ಕಲ್ಲಕುರಿಚಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ತಂದೆಯ ಮೃತದೇಹದ ಮುಂದೆಯೇ ಪ್ರಿಯತಮೆಯನ್ನು ವಿವಾಹವಾಗುವ ಮೂಲಕ ತಂದೆಯ ಕೊನೆಯ ಆಸೆಯನ್ನು ಈಡೇರಿಸಿದ್ದಾನೆ. ಸೋಮವಾರ ಮಧ್ಯಾಹ್ನ ಕಲ್ಲಕುರಿಚಿ ಬಳಿ ಘಟನೆ ನಡೆದಿದ್ದು, ಅದೇ ದಿನ ಸಂಜೆ ತಂದೆಯ ಅಂತಿಮ ವಿಧಿವಿಧಾನಗಳು ನಡೆದವು ಎಂದು ವರದಿ ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಡಿಎಂಕೆಯ ಸಕ್ರಿಯ ಸದಸ್ಯರಾಗಿರುವ ಪೆರುವಂಗೂರಿನ ವಿ ರಾಜೇಂದ್ರನ್ (65) ಕಳೆದೆರಡು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಆದರೆ ಮಗನ ಮದುವೆ ನೋಡಬೇಕೆಂದು ಅವರ ಕೊನೆಯ ಆಸೆಯಾಗಿತ್ತು.
ಅದರಂತೆ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರ್.ಪ್ರವೀಣ್ (29) ಅವರ ವಿವಾಹವನ್ನು ಅವರ ಕುಟುಂಬವು ಮಾರ್ಚ್ 27 ರಂದು ಕಲ್ಲಕುರಿಚಿಯಲ್ಲಿ ಪ್ರವೀಣ್ ಸಹೋದ್ಯೋಗಿ ಚೆನ್ನೈನ ಮೆಡವಕ್ಕಂನ ಎಸ್ ಸೌರ್ನಮಾಲಿಯಾ (23) ರೊಂದಿಗೆ ನಿಶ್ಚಯಿಸಲಾಗಿತ್ತು.
ಆದರೆ, ದುರದೃಷ್ಟವಶಾತ್ ಪ್ರವೀಣ್ ತಂದೆ ರಾಜೇಂದ್ರನ್, ಭಾನುವಾರ ಮಾರ್ಚ್ ೧೯ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅದೇ ರಾತ್ರಿ ನಿಧನರಾದರು. ಆದರೆ, ತಂದೆಯ ಕೊನೆಯಾಸೆಯನ್ನು ಈಡೇರಿಸಲು ನಿರ್ಧರಿಸಿದ ಮಗ ತಂದೆಯ ವಿಧಿವಿಧಾನ ಮುಗಿಸುವ ಮೊದಲು ಮದುವೆಯನ್ನು ಆಯೋಜಿಸಿ, ಕುಟುಂಬದೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದಿದ್ದಾನೆ. ಅದರಂತೆ ಮಾರ್ಚ್ ೨೦ ರಂದು ಮದುವೆಯಾದರು.
ಪ್ರವೀಣ್ ಇದನ್ನು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ತಕ್ಷಣವೇ ಮದುವೆಯ ವ್ಯವಸ್ಥೆ ಮಾಡಲಾಗಿದೆ. ಮದುವೆ ಮುಗಿದು ನಂತರ ರಾಜೇಂದ್ರನ್ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಅಂತಿಮ ಮೆರವಣಿಗೆ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಮದುವೆ ಮಾಡಿರುವ ವಿಚಾರವಾಗಿ ಮಾತನಾಡಿದ ಪ್ರವೀಣ್, ‘ಕೆಲವು ಗ್ರಾಮಸ್ಥರು ಮತ್ತು ಸಂಬಂಧಿಕರ ಹೇಳಿಕೆಗಳಿಗೆ ನಾನು ಹೆದರುವುದಿಲ್ಲ, ಏಕೆಂದರೆ ಇದು ಮಗನಾಗಿ ನನ್ನ ಕರ್ತವ್ಯ’ ಮಾಡಿದ್ದೇನೆ ಎಂದಿದ್ದಾರೆ.