ನ್ಯೂಸ್ನಾಟೌಟ್: ಅಫ್ಗಾನಿಸ್ತಾನ, ಪಾಕಿಸ್ತಾನ, ಉತ್ತರ ಭಾರತದಲ್ಲಿ ಮಂಗಳವಾರ ತಡರಾತ್ರಿ ಪ್ರಬಲ ಭೂಕಂಪನವಾಗಿದೆ.
ಅಫ್ಗಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ 6.6 ತೀವ್ರತೆಯ ಭೂಕಂಪನವಾಗಿದ್ದು, ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನದಿಂದ 11 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಅವರು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಫೆಡರಲ್ ಗವರ್ನಮೆಂಟ್ ಪಾಲಿಕ್ಲಿನಿಕ್ನಲ್ಲಿ ತುರ್ತು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕೆಲವು ಸೆಕೆಂಡುಗಳ ಕಾಲ ಪ್ರಬಲವಾದ ಕಂಪನಗಳು ಸಂಭವಿಸಿದ್ದು, ಜನರಲ್ಲಿ ಭೀತಿ ಸೃಷ್ಟಿಸಿದೆ. ರಾತ್ರಿ 10.17.27ಕ್ಕೆ ಭೂಕಂಪನ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಗಾನಿಸ್ತಾನದ ಜುರ್ನ್ನಲ್ಲಿ 180 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಭೂಕಂಪದ ಅನುಭವವಾಗಿದೆ. ದೆಹಲಿ-ಎನ್ಸಿಆರ್ನಾದ್ಯಂತ ಬಲವಾದ ಕಂಪನಗಳು ಸಂಭವಿಸಿವೆ. ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗಿದ್ದು, ಉಪಕರಣಗಳು ತೂಗಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.