ನ್ಯೂಸ್ ನಾಟೌಟ್: ಗುಜರಾತ್ನ ಸೂರತ್ನಲ್ಲಿ ಅಧಿಕಾರಿಗಳು ಮಂಗಳವಾರ ಮಾರ್ಚ್ ೨೧ರಂದು ನಿಯಂತ್ರಿತ ಸ್ಫೋಟದ ಮೂಲಕ ವಿದ್ಯುತ್ ಉತ್ಪಾದನಾ ಕೇಂದ್ರದ 30 ವರ್ಷ ಹಳೆಯ ಕೂಲಿಂಗ್ ಟವರ್ ಅನ್ನು ಕೆಡವಿದ್ದಾರೆ. 85 ಮೀಟರ್ ಎತ್ತರದ ಆರ್ಸಿಸಿ ಕೂಲಿಂಗ್ ಟವರ್ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ಅಪಾಯವಿಲ್ಲದೆ ನೆಲಕ್ಕೆ ಬೀಳುವಂತೆ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿದ್ಯುತ್ ಉತ್ಪಾದನಾ ಕೇಂದ್ರದ ಅಧಿಕಾರಿಗಳ ಪ್ರಕಾರ, ಅನಿಲ ಆಧಾರಿತ ‘ಉತ್ರಾನ್’ ಎಂಬ ವಿದ್ಯುತ್ ಕೇಂದ್ರದ 72 ಮೀಟರ್ ವ್ಯಾಸವನ್ನು ನಾಜೂಕಾಗಿ ತಂತ್ರಜ್ಞಾನಗಳ ಸಹಾಯದಿಂದ ಬೆಳಿಗ್ಗೆ 11:10 ರ ಸುಮಾರಿಗೆ ಕೆಳಗೆ ತರಲಾಯಿತು. 262.5 ಕೆಜಿ ತೂಕವಿರುವ ಆಧುನಿಕ ಸ್ಫೋಟಕಗಳನ್ನು ಕೆಡವಲು ಬಳಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ತಾಪಿ ನದಿಯ ದಡದಲ್ಲಿರುವ ವಿದ್ಯುತ್ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಜನರು ಟವರ್ನಿಂದ 250-300 ಮೀಟರ್ ದೂರದಲ್ಲಿ ನಿಲ್ಲುವಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
ನಿರ್ಧಿಷ್ಟ ಅಳತೆಯ ವರೆಗೆ ಕೊರೆದ ನಂತರ ಸ್ಫೋಟಕಗಳನ್ನು ಸ್ಥಾಪಿಸಲಾಯಿತು ಮತ್ತು ತಜ್ಞರ ಸಹಾಯವನ್ನು ಪಡೆದು ಟವರ್ ಅನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಗೋಪುರವು ಗುಜರಾತ್ ರಾಜ್ಯ ವಿದ್ಯುತ್ ನಿಗಮದ 135-ಮೆಗಾವ್ಯಾಟ್ ವಿದ್ಯುತ್ ಸ್ಥಾವರದ ಭಾಗವಾಗಿದ್ದು, ಇದು 85 ಮೀಟರ್ ಎತ್ತರ ಮತ್ತು 72 ಮೀಟರ್ ಕೆಳಭಾಗದ ವ್ಯಾಸವನ್ನು ಹೊಂದಿದೆ” ಎಂದು ಉಸ್ತುವಾರಿ ಮತ್ತು ಮುಖ್ಯ ಎಂಜಿನಿಯರ್ ಆರ್.ಆರ್. ಪಟೇಲ್ ಮಾಹಿತಿ ನೀಡಿದರು.
ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ 375 ಮೆಗಾವ್ಯಾಟ್ ಸಾಮರ್ಥ್ಯದ ಮತ್ತೊಂದು ಸ್ಥಾವರವು ಚಾಲನೆಯಲ್ಲಿದ್ದು, 1993 ರಲ್ಲಿ ನಿರ್ಮಿಸಲಾದ ಗೋಪುರದ ಅಡಿಪಾಯವು ತಾಂತ್ರಿಕ ದೋಷದ ಕಾರಣಗಳಿಂದಾಗಿ ಕೆಡವಬೇಕಾಯಿತು. 2017 ರಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರದ ಅನುಮೋದನೆಯನ್ನು ತೆಗೆದುಕೊಳ್ಳಲಾಗಿದ್ದು, ಸೆಪ್ಟೆಂಬರ್ 2021 ರಲ್ಲಿ, ಕೆಡವುವ ಪ್ರಕ್ರಿಯೆಯು ಪ್ರಾರಂಭವಾಯಿತು ಮತ್ತು ಬಾಯ್ಲರ್, ಜನರೇಟರ್, ಟರ್ಬೈನ್ ಮತ್ತು ಟ್ರಾನ್ಸ್ಫಾರ್ಮರ್ ಧ್ವಂಸಗೊಳಿಸಿದ ಬಳಿಕ ಈಗ ಟವರ್ ಅನ್ನು ಕೆಡವಲಾಗಿದೆ ಎಂದು ವರದಿ ತಿಳಿಸಿದೆ.