ನ್ಯೂಸ್ ನಾಟೌಟ್: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಿಸುವ ಕಾರ್ಯ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ. ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಹೊದಿಗೆಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ ಎಂದು ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿ ಅಲ್ಲಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.
ಅಯೋರ್ಧಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯ ವೇಳೆಗೆ ದೇಶದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ 25000 ಜನರ ವಸತಿ ಸಾಮರ್ಥ್ಯದ ಬೃಹತ್ ಯಾತ್ರಿ ಭವನ ನಿರ್ಮಿಸಲಾಗುತ್ತಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳ ಕೆತ್ತನೆಗಾಗಿ ಕರ್ನಾಟಕದ ಹೆಗ್ಗಡೆ ದೇವನಕೋಟೆ , ಕಾರ್ಕಳ, ತಮಿಳುನಾಡಿನ ಮಹಾಬಲಿ ಪುರಂ , ರಾಜಸ್ಥಾನ ಹಾಗೂ ನೇಪಾಳಗಳಿಂದ ಶಿಲೆಗಳನ್ನು ತರಲಾಗಿದ್ದು, ಶಿಲ್ಪಿಗಳು ಅವುಗಳನ್ನು ಪರಿಶೀಲಿಸಿ ಉತ್ತಮವಾದವುಗಳನ್ನು ಆಯ್ದುಕೊಂಡು ವಿಗ್ರಹಗಳ ಕೆತ್ತನೆ ಕಾರ್ಯ ಆರಂಭಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಶ್ರೀಗಳ ಜತೆಗೆ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ಮುಖಂಡ ಗೋಪಾಲ್ ಜೀ , ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್ , ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಉಪಸ್ಥಿತರಿದ್ದರು.