ನ್ಯೂಸ್ ನಾಟೌಟ್: ವಾಹನ ಸವಾರರಿಗೆ ಎಪ್ರಿಲ್ ಒಂದರಿಂದ ವಿಪರೀತ ಹೊರಬೀಳಲಿದೆ. ಕಾರಣ ದೇಶಾದ್ಯಂತ ಟೋಲ್ ದರಗಳನ್ನು ಶೇ.5ರಿಂದ 10ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈ ಏಕಪಕ್ಷೀಯ ನಿರ್ಧಾರ, ಕೇಂದ್ರ ಸರ್ಕಾರದ ಸುಲಿಗೆ ನೀತಿಯನ್ನು ವಿರೋಧಿಸಿ ಎಪ್ರಿಲ್ ಒಂದರಂದು ರಾಜ್ಯಾದ್ಯಂತ ಟೋಲ್ ಗೇಟ್ಗಳ ಮುಂಭಾಗ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸುವಂತೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮನವಿ ಮಾಡಿದೆ.
ಈಗಾಗಲೆ ಜನರು ಬೆಲೆಯೇರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಕಂಗಲಾಗಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸಾರ್ವಕಾಲಿಕ ಇಳಿಕೆಯಾದರೂ ಭಾರತದಲ್ಲಿ ಮಾತ್ರ ತೈಲ ಬೆಲೆ ವಿಪರೀತ ಹೆಚ್ಚಳವಾಗಿದೆ. ಇದರಿಂದ ಸರಕು ಸಾಗಣೆ ದುಬಾರಿಯಾಗಿ ಜನಸಾಮಾನ್ಯರ ಬದುಕು ಬೀದಿಗೆ ಬರುವಂತಾಗಿದೆ. ರಸ್ತೆಗಳಲ್ಲಿ ವಾಹನಗಳ ಓಡಾಟದ ಹೆಚ್ಚಳದಿಂದ ಟೋಲ್ ಕಂಪೆನಿಗಳು ದೊಡ್ಡ ಮಟ್ಟದ ಲಾಭ ಗಳಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಸರ್ಕಾರಗಳು ಬೆಂಬಲ ನೀಡುವುದು ಜನವಿರೋಧಿ ನೀತಿಯಾಗಿದೆ. ಈಗಾಗಲೇ ಫಾಸ್ಟ್ ಟ್ಯಾಗ್ ನಿಯಮದಿಂದ ಟೋಲ್ ಕಂಪೆನಿಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದ್ದರೂ ವರ್ಷದಿಂದ ವರ್ಷಕ್ಕೆ ಟೋಲ್ ಸುಂಕದಲ್ಲಿ ಮಾತ್ರ ಇಳಿಕೆಯಾಗುವುದಿಲ್ಲ. ಬದಲಿಗೆ ಪ್ರತಿವರ್ಷ ಎಪ್ರಿಲ್ನಲ್ಲಿ ಕಡ್ಡಾಯ ಎಂಬಂತೆ ಟೋಲ್ ದರ ಹಚ್ಚಿಸಲಾಗುತ್ತಿದೆ. ಇದು ಸಂಕಷ್ಟದಲ್ಲಿರುವ ಜನರಿಂದ ಅಧಿಕಾರದ ಬಲದ ಮೂಲಕ ಬಲವಂತವಾಗಿ ನಡೆಸುವ ಸುಲಿಗೆ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ ಒಂದರಂದು ಟೋಲ್ ದರ ಹೆಚ್ಚಳದ ಸಂದರ್ಭ ಆಯಾಯ ಭಾಗದ ನಾಗರಿಕ ಸಂಘಟನೆಗಳು ರಾಜ್ಯದ ಟೋಲ್ ಗೇಟ್ಗಳ ಮುಂಭಾಗದಲ್ಲಿ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಗಳಿಗೆ ಪ್ರಬಲ ಎಚ್ಚರಿಕೆ ರವಾನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.