ನ್ಯೂಸ್ನಾಟೌಟ್: ಕನ್ಯಾಕುಮಾರಿ ಜಿಲ್ಲೆಯ ಕೆಥೋಲಿಕ್ ಚರ್ಚ್ ಒಂದರ ಪಾದ್ರಿಯೊಬ್ಬ ಕದ್ದು ಮುಚ್ಚಿ ಯುವತಿಯರ ಸ್ನೇಹ ಬೆಳೆಸಿದ್ದಲ್ಲದೆ, ಯುವತಿಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ವಿಡಿಯೋವನ್ನು ಮಾಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆದ ಬಳಿಕ ನಾಪತ್ತೆಯಾಗಿದ್ದ ಆತನನ್ನು ತಮಿಳುನಾಡು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಕನ್ಯಾಕುಮಾರಿ ಜಿಲ್ಲೆಯ ಸೀರೋ ಮಲಂಕರ ಕೆಥೋಲಿಕ್ ಚರ್ಚ್ನಲ್ಲಿ ಪಾದ್ರಿಯಾಗಿದ್ದ ಬೆನೆಡಿಕ್ಟ್ ಆಂಟೋ (30 )ಎಂದು ಗುರುತಿಸಲಾಗಿದೆ. ಈತ ಯುವತಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹರಿದಾಡಿದ ಬೆನ್ನಲ್ಲೇ ಸಂತ್ರಸ್ತ ಯುವತಿ ಪಾದ್ರಿ ಮತ್ತಿತರ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಪಾದ್ರಿ ಬೆನೆಡಿಕ್ಟ್ ಆಂಟೋನನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತ ಬೆನೆಡಿಕ್ಟ್ ಆಂಟೋಗೆ ಹಲವು ಹುಡುಗಿಯರ ಜತೆಗೆ ಸಂಬಂಧವಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಆತನ ಲ್ಯಾಪ್ಟ್ಯಾಪ್ನಲ್ಲಿ ಹಲವು ಯುವತಿಯರ ಜತೆಗಿದ್ದ ವಿಡಿಯೋಗಳಿದ್ದು, ಅವನ್ನು ಮೊಬೈಲ್ ಮೂಲಕ ಜಾಲತಾಣದಲ್ಲಿ ಲೀಕ್ ಮಾಡಲಾಗಿತ್ತು.
ನರ್ಸಿಂಗ್ ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ ತನ್ನ ಜತೆಗೆ ಕ್ಲೋಸ್ ಆಗಿರುವಂತೆ ಪಾದ್ರಿ ಒತ್ತಾಯಿಸುತ್ತಿದ್ದ. ಆನಂತರ, ತಾಯಿ ಮೂಲಕ ನನ್ನ ನಂಬರ್ ಪಡೆದು ವಾಟ್ಸ್ಯಾಪ್ ಕರೆ ಮಾಡುತ್ತಿದ್ದರು. ಖಾಸಗಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿಸಿದ್ದಾಳೆ. ದೂರಿನಲ್ಲಿ ಬೆನೆಡಿಕ್ಟ್ ಆಂಟೋ, ಪೌಲ್ ರಾಜ್ ಇನ್ನೂ ಹಲವರ ಹೆಸರುಗಳನ್ನು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಪಾದ್ರಿ ಜತೆಗೆ ಹತ್ತಿರವಿದ್ದ ಯುವಕನೇ ಆತನ ಲ್ಯಾಪ್ಟಾಪ್ನಲ್ಲಿದ್ದ ವಿಡಿಯೋಗಳನ್ನು ಕದ್ದು ಲೀಕ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿ ಈಗಾಗಲೇ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಹಿಂದೆಯೂ ಬೆನೆಡಿಕ್ಟ್ ಆಂಟೋ ಕಿರುಕುಳ ನೀಡಿರುವ ಬಗ್ಗೆ ಹಲವು ಯುವತಿಯರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಆರೋಫ ಕೇಳಿ ಬಂದಿದೆ. ಕೆಲವು ಹುಡುಗರ ಜತೆಗೆ ಪಾದ್ರಿಗೆ ಜಗಳವಾಗಿದ್ದು, ಆನಂತರ ಓರ್ವ ಪಾದ್ರಿಯ ಲ್ಯಾಪ್ಟ್ಯಾಪ್ ಇನ್ನಿತರ ಕಂಪ್ಯೂಟರ್ಗಳನ್ನು ಕದ್ದು ವಿಡಿಯೋ ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಪಾದ್ರಿ ಬೆನೆಡಿಕ್ಟ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಪಾದ್ರಿಯನ್ನು ಪ್ರಶ್ನಿಸಲು ಬಂದಿದ್ದ. ಈ ವೇಳೆ ಜಗಳವಾಗಿದ್ದು, ವಿದ್ಯಾರ್ಥಿ ಪಾದ್ರಿಗೆ ಹಲ್ಲೆ ನಡೆಸಿದ್ದ ಬಗ್ಗೆ ಪಾದ್ರಿಯ ದೂರಿನಂತೆ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪಾದ್ರಿಯ ಅಸಭ್ಯ ನಡವಳಿಕೆಯ ಕುರಿತ ಪೂರಕ ದಾಖಲೆಗಳನ್ನು ಮುಂದಿಟ್ಟು ವಿದ್ಯಾರ್ಥಿ ತಾಯಿ ಪೊಲೀಸರಿಗೆ ದೂರು ನೀಡಿ ಪಾದ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.