ನ್ಯೂಸ್ನಾಟೌಟ್: ರಾಜಕೀಯವಾಗಿ ಭಾರಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮಂಡ್ಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುನಿರತ್ನ ಉರಿಗೌಡ-ನಂಜೇಗೌಡ ಸಿನಿಮಾ ಚಿತ್ರೀಕರಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಉರಿಗೌಡ-ನಂಜೇಗೌಡ ವಿವಾದಿತ ಚಲನಚಿತ್ರ ಗೊಂದಲಗಳಿಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತೆರೆ ಎಳೆದಿದ್ದಾರೆ.
ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಉರಿಗೌಡ-ನಂಜೇಗೌಡ ಸಿನಿಮಾ ಮಾಡುವುದನ್ನು ಕೈ ಬಿಡುವಂತೆ ಸಲಹೆ ನೀಡಿದ್ದಾರೆ. ಸ್ವಾಮೀಜಿ ಮಾತಿಗೆ ಗೌರವ ಕೊಟ್ಟು ಸಿನಿಮಾ ನಿರ್ಮಾಣ ಮಾಡದಿರಲು ನಿರ್ಧರಿಸಿದ್ದೇನೆ. ನಾನೋರ್ವ ನಿರ್ಮಾಪಕನಾಗಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದೆ. ಎಲ್ಲವೂ ಸತ್ಯ ಘಟನೆ ಎಂದು ಚಲನಚಿತ್ರ ಮಾಡಲು ಸಾಧ್ಯವಿಲ್ಲ. ಉರಿಗೌಡ ಮತ್ತು ನಂಜೇಗೌಡ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದರು.
ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್ ಮೂಲಕ ತಿಳಿಸಿದ್ದರು.
ಉರೀಗೌಡ ನಂಜೇಗೌಡ ಟೈಟಲ್ಗೆ ಅರ್ಜಿ ಸಲ್ಲಿಸಿದ್ದರ ವಿರುದ್ಧ ಈಗಾಗಲೇ ಆಕ್ಷೇಪ ವ್ಯಕ್ತವಾಗಿದ್ದವು. ಒಕ್ಕಲಿಗ ಯುವಬ್ರಿಗೆಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೆಡ್ ವಿರೋಧಿಸಿತ್ತು. ಅಲ್ಲದೇ ಇದಕ್ಕೆ ಅನುಮತಿ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿತ್ತು. ‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರೀಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.