ನ್ಯೂಸ್ನಾಟೌಟ್: ಅಕ್ರಮ ಮರಳು ಸಾಗಾಟದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ನಿವಾಸಿಯೊಬ್ಬರ ದ್ವಿಚಕ್ರ ವಾಹನವನ್ನು ಮರಳು ಮಾಫಿಯಾ ನಡೆಸುತ್ತಿರುವ ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ಶನಿವಾರ ಮಧ್ಯರಾತ್ರಿ ಉದ್ಯಾವರ ಮಠದಕುದ್ರುವಿನಲ್ಲಿ ನಡೆದಿದೆ.
ಇಲ್ಲಿನ ಸ್ಥಳೀಯ ನಿವಾಸಿ ಭಾಸ್ಕರ್ ಕರ್ಕೆರ ಎಂಬವರ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಪುಡಿಗೈದು ವಿಕೃತಿ ಮೆರೆದಿದ್ದಾರೆ. ಭಾನುವಾರ ಬೆಳಗ್ಗೆ ಎದ್ದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಠದ ಕುದ್ರುವಿನಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಈ ಹಿಂದೆ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಯುತ್ತಿತ್ತು. ಆದರೆ ಈಗ ಮರಳು ಮಾಫಿಯಾ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಹೊರರಾಜ್ಯದ ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿಕೊಂಡು ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರು ನಿತ್ಯವೂ ಶಬ್ದ ಮಾಲಿನ್ಯ ಸಮಸ್ಯೆ ಎದುರಿಸಬೇಕಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದರು. ಕಡಿವಾಣ ಹಾಕದಿದ್ದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಸ್ಥಳೀಯರಾದ ಭಾಸ್ಕರ್ ಕರ್ಕೆರ ಸಹಿತ ಇತರರು ಭಾಗವಹಿಸಿದ್ದರು. ಇದರಿಂದ ಕೆರಳಿದ್ದ ಮರಳು ಮಾಫಿಯಾದ ಪುಂಡರು ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ ಮರುದಿನವೇ ಭಾಸ್ಕರ್ ಕರ್ಕೆರ ಅವರ ದ್ವಿಚಕ್ರ ವಾಹನದ ಮೇಲೆ ಅಟ್ಟಹಾಸ ಮೆರೆದಿದ್ದಾರೆ.