ನ್ಯೂಸ್ನಾಟೌಟ್: ದಿನೇ ದಿನ ತಾಪಮಾನ ಹೆಚ್ಚುತ್ತಿದ್ದು, ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಕ್ಯಾಂಟೀನ್, ಹೋಟೆಲ್, ಬಾರ್, ಬೇಕರಿ ಮತ್ತು ಸಿದ್ಧಪಡಿಸಿದ ಆಹಾರಗಳನ್ನು ಮಾರಾಟ ಮಾಡುವ ಉದ್ಯಮಿಗಳು ಶುಚಿತ್ವ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆಹಾರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಹೋಟೆಲ್, ಆಹಾರೋದ್ಯಮಿಗಳು ನೀರಿನ ಸಂಪು, ಟ್ಯಾಂಕ್, ತೆರೆದ ಕೊಳವೆ ಬಾವಿಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಸಾರ್ವಜನಿಕರಿಗೆ ಶುದ್ಧೀಕರಿಸಿದ, ಬಿಸಿ ನೀರನ್ನು ನೀಡಬೇಕು. ಆಹಾರ ಉತ್ಪನ್ನ ತಯಾರಕರು ಕಡ್ಡಾಯವಾಗಿ ಏಪ್ರನ್, ಕೈಗವಸು, ಹೆಡ್ಕವರ್ ಧರಿಸಬೇಕು. ಸಿದ್ಧಪಡಿಸಿದ ಆಹಾರವನ್ನು ನೊಣ ಮತ್ತಿತರ ಕೀಟಗಳು ಸ್ಪರ್ಶಿಸದಂತೆ ವ್ಯವಸ್ಥಿತವಾಗಿ ಸಂಗ್ರಹಿಸಿಡಬೇಕು. ಜ್ಯೂಸ್, ತಂಪು ಪಾನೀಯ ವಿತರಕರು ಕೂಡ ಶುದ್ಧ ನೀರಿನಲ್ಲಿ ತಯಾರಿಸಿದ ಮಂಜುಗಡ್ಡೆಯನ್ನೇ ಬಳಸಬೇಕು. ಈ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಮೀನು, ಮಾಂಸ ಮಾರಾಟಗಾರರು ಅದರ ತಾಜಾತನ ಪರಿಶೀಲಿಸಿಯೇ ಗ್ರಾಹಕರಿಗೆ ಪೂರೈಸಬೇಕು.
ಆಹಾರ ಪೂರೈಸುವ ಎಲ್ಲ ಉದ್ಯಮಿಗಳು ಆಹಾರ ಸುರಕ್ಷಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.