ನ್ಯೂಸ್ ನಾಟೌಟ್ : ಬಿಜೆಪಿ ಯುವ ನಾಯಕ ದಿವಂಗತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಹತ್ಯೆ ನಡೆದು ಕೆಲವು ತಿಂಗಳುಗಳು ಕಳೆದರೂ ಎನ್ಐಎ (ರಾಷ್ಟ್ರೀಯ ತನಿಖಾ ದಳ) ನಿಂದ ಪ್ರವೀಣ್ ಹಂತಕರ ಬೇಟೆ ಮುಗಿದಿಲ್ಲ. ಇದೀಗ ಪ್ರಕರಣದ ಕುರಿತಂತೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಚಿಗೆ ಸಂಬಂಧಿಸಿದ ಫುಲ್ವಾರಿ ಷರೀಫ್ ಭಯೋತ್ಪಾದನಾ ಘಟಕಕ್ಕೆ ನೆರವು ಒದಗಿಸಿದವರೇ ಪ್ರವೀಣ್ ಹತ್ಯೆ ಸಂಚಿಗೂ ಹಣಕಾಸಿನ ನೆರವು ನೀಡಿದ್ದಾರೆ ಅನ್ನುವ ಸ್ಫೋಟಕ ವಿಚಾರ ಬೆಚ್ಚಿ ಬೀಳಿಸಿದೆ.
ಕಳೆದ ಜುಲೈ 26 ರಂದು ರಾತ್ರಿ ಬೆಳ್ಳಾರೆಯ ಅಕ್ಷಯ್ ಚಿಕನ್ ಫಾರ್ಮ್ ಅಣತಿ ದೂರದಲ್ಲಿ ಪ್ರವೀಣ್ ನೆಟ್ಟಾರ್ ಅವರನ್ನು ಹಂತಕರು ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಾಫಿ ಬೆಳ್ಳಾರೆ ಸಹಿತ ಹಲವು ಮಂದಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಸದ್ಯ ಪುತ್ತೂರು, ಬಂಟ್ವಾಳದ ಐವರ ಪಾತ್ರ ಇರುವುದು ತನಿಖೆಯ ವೇಳೆ ಕಂಡುಬಂದಿದೆ. ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ಪ್ರಮುಖ ಮೂವರು ಆರೋಪಿಗಳ ಪೈಕಿ ಅಂಕತ್ತಡ್ಕ ನಿವಾಸಿ ರಿಯಾಜ್ ಕೂಡ ಒಬ್ಬ. ಈತನ ಮನೆಯಲ್ಲಿದ್ದ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭ ಆತನ ಖಾತೆಗೆ ಹಣ ಸಂದಾಯ ಆಗಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಎನ್ಐಎ ತನ್ನ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.